ಕೋಲಾರ ಮಾ-2, ಲಕ್ಷಾಂತರ ರೂಪಾಯಿ ಶುಲ್ಕ ಪಡೆದು ನೀಟ್, ಸಿ.ಇಟಿ ತರಬೇತಿ ನೀಡುತ್ತೇವೆಂದು ವಿದ್ಯಾರ್ಥಿಗಳನ್ನು ವಂಚನೆ ಮಾಡುತ್ತಿರುವ ಆಕಾಶ್ ಬೈಜುಸ್ ಸಂಸ್ಥೆ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ನೊಂದಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತ ಸಂಘದಿಂದ ಶಿಕ್ಷಣ ಸಂಸ್ಥೆ ಮುಂದೆ ಹೋರಾಟ ಮಾಡಿ ಆರಕ್ಷಕ ಉಪನಿರೀಕ್ಷಕರಾದ ಸಹೀದ್ ಅಹಮದ್ ಮುಖಾಂತರ ಜಿಲ್ಲಾಧಿಕರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಹೋರಾಟದ ಸ್ಥಳಕ್ಕೆ ಬಂದ ಶಿಕ್ಷಣ ಸಂಸ್ಥೆಯ ರಾಕೇಶ್, ರಾಜಗೋಪಾಲ್, ನೊಂದ ಪೋಷಕರ ಮನವೊಲಿಸಿ, ನಿಮ್ಮ ಮಕ್ಕಳಿಗೆ ಬುಧವಾರದ ಒಳಗೆ ನ್ಯಾಯ ದೊರೆಕಿಸಿಕೊಟ್ಟು ತರಗತಿಗಳನ್ನು ಆರಂಭ ಮಾಡಿ ಉತ್ತಮ ಫಲಿತಾಂಶ ಕೊಡುವ ಭರವಸೆ ನೀಡಿದರು.
ಅಲ್ಲಿಗೂ ತಣ್ಣಗಾಗದ ಪೋಷಕರು ಆಕ್ರೋಶ ವ್ಯಕ್ತಪಡಿಸಿ ನಿಮ್ಮ ಸಮಯಾವಕಾಶ ಬೇಕಾಗಿಲ್ಲ. ನಮ್ಮ ಮಕ್ಕಳಿಗೆ ನ್ಯಾಯ ಕೊಡಿಸಿ ಎಂದು ತಿರುಗಿಬಿದ್ದಾಗ ಸ್ಥಳದಲ್ಲಿದ್ದ ಪೊಲೀಸರು ಮನವೊಲಿಸಿ ಶಾಂತಿಯುತ ಮಾತುಕತೆಗೆ ಅವಕಾಶ ಮಾಡಿಕೊಟ್ಟರು.
ಶಿಕ್ಷಣ ವ್ಯವಸ್ಥೆ ವ್ಯಾಪಾರದ ಕಾರ್ಪೊರೇಟ್ ಕಂಪನಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿ ಕೋಟ್ಯಾಂತರ ಪೋಷಕರ ಕನಸು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟ ವಾಡುತ್ತಿದ್ದರು ಶಿಕ್ಷಣ ವ್ಯವಸ್ಥೆ ಹಾಗೂ ಕಾರ್ಪೋರೇಟ್ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ತರಬೇತಿ ನೀಡುವ ಪರವಾನಿಗೆ ಇಲ್ಲದ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಶಿಕ್ಷಣ ಸಚಿವರು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಾಲಾ ಕಾಲೇಜುಗಳು ಪ್ರಥಮ ಮತ್ತು ದ್ವಿತೀಯ ಪಿಯುಸಿ (ವಿಜ್ಞಾನ) ತರಗತಿಗಳಿಗೆ ಹಾಜರಾತಿ ದಾಖಲು ಮಾಡಿಕೊಳ್ಳುವಾಗ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಶಾಲೆಗೆ ಸೇರಿಸಿ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕನಸನ್ನು ನನಸು ಮಾಡಲು ನೀಟ್, ಸಿಇಟಿ ವೃತ್ತಿಪರ ಕೋರ್ಸುಗಳಿಗೆ ಉಚಿತವಾಗಿ ತರಬೇತಿ ನೀಡುತ್ತೇವೆಂದು ದಾಖಲು ಮಾಡಿಕೊಂಡು ಆ ನಂತರ ಯಾವುದೇ ತರಬೇತಿ ಇಲ್ಲದೆ ವಂಚನೆ ಮಾಡುವ ಕಾಲೇಜುಗಳ ಹಗಲು ದರೋಡೆಗೆ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಲಕ್ಷಾಂತರ ರೂಪಾಯಿ ಡೊಣೇಷನ್ ನೀಡಿ ಹಾಜರಾತಿ ಮಾಡಿದ ನಂತರ ಮಕ್ಕಳ ಕನಸು ನನಸು ಮಾಡಲು ಉತ್ತಮ ತರಬೇತಿ ಪಡೆಯಲು ಮತ್ತೆ ಆಕಾಶ್ ಬೈಜುನ್ ಮತ್ತಿತರ ನೂರೊಂದು ಪರವಾನಿಗೆ ಇಲ್ಲದ ನಾಯಿಕೊಡೆಗಳಂತೆ ತೆಲೆ ಎತ್ತಿ ನಮ್ಮ ಸಂಸ್ಥೆ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಅತಿ ಬುದ್ದಿವಂತ ಶಿಕ್ಷಕರಿಂದ ನೀಟ್ ಹಾಗೂ ಸಿ.ಇಟಿಗೆ ತರಬೇತಿ ನೀಡಿ ಉಚಿತವಾಗಿ ಡಾಕ್ಟರ್ ಇಂಜಿನಿಯರ್, ಕೋರ್ಸುಗಳನ್ನು ಪಡೆಯಬಹುದೆ ಎಂದು ಆಸೆ ಹುಟ್ಟಿಸಿ ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡಿ ತಮ್ಮ ನಿರೀಕ್ಷೆಗೆ ತಕ್ಕ ಹಾಜರಾತಿ ಆಗಿಲ್ಲವೆಂಬ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ತರಬೇತಿ ನೀಡದೆ ವಂಚನೆ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗಿ ಕೂಲಿ ಮಾಡುವ ಪೋಷಕರು ಸಾಲ ಮಾಡಿ ಪಾವತಿಸಿರುವ ಶುಲ್ಕಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ನೊಂದ ಪೋಷಕರಾದ ಮಹೇಶ್, ಹಾಗೂ ವೆಂಕಟೇಶಪ್ಪ ಮಾತನಾಡಿ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಾಲೇಜಿನ ಆಡಳಿತ ಮಂಡಳಿಯ ಮಾತು ಕೇಳಿ ಆಕಾಶ್ ಬೈಜುನ್ ಶಿಕ್ಷಣ ಸಂಸ್ಥೆಗೆ ನೀಟ್ ಹಾಗೂ ಸಿ.ಇಟಿ ತರಬೇತಿ ಪಡೆಯಲು ದಾಖಲು ಮಾಡಿ ಲಕ್ಷ ರೂಪಾಯಿ ಶುಲ್ಕ ಪಾವತಿಸಿ 6 ತಿಂಗಳ ಕೆಳೆದರು ಇದುವರೆವಿಗೂ ಯಾವುದೇ ತರಗತಿ ಪ್ರಾರಂಭ ಮಾಡದೆ ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟ ವಾಡುತ್ತಿದ್ದಾರೆ. ಕೇಳಿದರೆ ದೌರ್ಜನ್ಯ ಮಾಡುವ ಜೊತೆಗೆ ನಿಮ್ಮ ಮಕ್ಕಳನ್ನು ನಮ್ಮ ಸಂಸ್ಥೆಗೆ ಸೇರಿಸಿ ಎಂದು ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ. ನೀವು ನಿಮ್ಮ ಕಾಲೇಜಿನ ಆಡಳಿತ ಮಂಡಳಿಯನ್ನು ಕೇಳಿಕೊಳ್ಳಿ ಎಂದು ದಬ್ಬಾಳಿಕೆ ಮಾಡುತ್ತಾರೆಂದು ಅಳಲು ತೋಡಿಕೊಂಡರು.
ಆಕಾಶ್ ಬೈಜುನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯನ್ನು ಕೇಳಿದರೆ ನಮಗೆ ನಿರೀಕ್ಷಿತ ಮಟ್ಟದಲ್ಲಿ ಹಾಜರಾತಿಯಾಗಿಲ್ಲ ಇರುವ 50 ಜನರಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ಕೊಟ್ಟು ತರಗತಿ ನಡೆಸಲು ಸಾಧ್ಯವಿಲ್ಲ. ನಿಮ್ಮ ಮಕ್ಕಳಿಗೆ ತರಬೇತಿ ಬೇಕಾದರೆ ಬೆಂಗಳೂರಿಗೆ ಕಳುಹಿಸಿಕೊಡಿ ಎಂದು ಹೇಳುತ್ತಾರೆ. ಒಂದು ಕಡೆ ಹಣವು ಇಲ್ಲ ಮತ್ತೊಂದು ಕಡೆ ಮಕ್ಕಳಿಗೆ ತರಬೇತಿ ಇಲ್ಲದೆ, ಪರದಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರಿಗೆ ದಿಕ್ಕು ತೋಚದಂತಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತ ಮುಂದೆ ಬಂದು ನೊಂದ ರೈತ ಕೂಲಿ ಕಾರ್ಮಿಕರ ಮಕ್ಕಳಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದರೆ ಭವಿಷ್ಯ ರೂಪಿಸಿಕೊಳ್ಳದ ನೂರಾರು ವಿದ್ಯಾರ್ಥಿಗಳು ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ನೋವಿನಲ್ಲಿ ಆತ್ಮಹತ್ಯೆಗಳು ನಡೆದುಹೋಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಕ್ರಮ ವಹಿಸಿ ಒಂದು ವೇಳೆ ವಿದ್ಯಾರ್ಥಿಗಳಿಗೆ ತರಬೇತಿ ನೀಡದೇ ಇದ್ದರೆ, ಆಕಾಶ್ ಬೈಜುನ್ ಶಿಕ್ಷಣ ಸಂಸ್ಥೆ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಮುದುವಾಡಿ ಚಂದ್ರಪ್ಪ, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ನೂರಾರು ಪೋಷಕರು, ವಿದ್ಯಾರ್ಥಿಗಳು, ಹಾಜರಿದ್ದರು.