ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಜಿಲ್ಲಾದ್ಯಂತ ಧಾರಾಕಾರ ಮಳೆ: ಒಂದೇ ವಾರದಲ್ಲಿ ದಾಖಲೆಯಾಯಿತು 44.3 ಮಿಮೀ ಮಳೆ
ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು, ಇನ್ನೂ ಮುಂದುವರೆದಿದೆ. ನಿರಂತರ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕುಂಟೆಗಳು, ಹಳ್ಳಗಳಲ್ಲಿ ನೀರು ಹರಿಯುತ್ತಿದೆ. ಇಡೀ ವಾತಾವರಣ ಹಚ್ಚ ಹಸಿರಿನಿಂದ ಕೂಡಿದ್ದು, ಮಲೆನಾಡನ್ನೂ ಮೀರಿಸುವಂತಹ ಕಣ್ಮನ ಸೆಳೆಯುವ ವಾತಾವರಣ ನಿರ್ಮಾಣವಾಗಿದೆ.
2021ರ ಜನವರಿ 1 ರಿಂದ ಜುಲೈ 15 ರವರೆಗೆ ವಾಡಿಕೆಯ 214.2 ಮಿಮೀ ಮಳೆಯ ಬದಲು 340.1 ಮಿಮೀ ಮಳೆ ಸುರಿದಿದ್ದು, ವಾಡಿಕೆಗಿಂತ 125 ಮಿಮೀ ಮಳೆ ಹೆಚ್ಚಿಗೆ ಸುರಿದಿದೆ. ಮಳೆಗಾಲ ಆರಂಭದ ಜೂನ್ 1 ರಿಂದ ಜುಲೈ 15 ರವರೆಗೆ ವಾಡಿಕೆಯ 97 ಮಿಮೀ ಮಳೆಯ ಬದಲು 180.5 ಮಿಮೀ ಮಳೆ ಸುರಿದಿದೆ.
ಜುಲೈ 1 ರಿಂದ 15 ರವರೆಗೆ ಕಳೆದ 15 ದಿನಗಳಲ್ಲಿ ವಾಡಿಕೆಯ 31.5 ಮಿಮೀ ಮಳೆಯ ಬದಲಾಗಿ 107.4 ಮಿಮೀ ಮಳೆ ಸುರಿದಿದೆ. ಒಟ್ಟಿನಲ್ಲಿ ಈವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ.
*ಬೆಳೆಗಳಿಗೆ ಆತಂಕ, ಜನಜೀವನ ಅಸ್ತವ್ಯಸ್ತ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರಿನ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುವ ಆತಂಕ ಎದುರಾಗಿದೆ. ಜಿಲ್ಲೆಯ ಕೋಲಾರ, ಮಾಲೂರು, ಶ್ರೀನಿವಾಸಪುರ ತಾಲೂಕುಗಳಲ್ಲಿ ಯತೇಚ್ಚವಾಗಿ ಮಳೆಯಾಗಿದೆ. ದೇಶದಾದ್ಯಂತ ಮುಂಗಾರುಮಳೆ ಜುಲೈ 13 ರಿಂದ ಪ್ರಾರಂಭವಾಗಿದ್ದು ಮುಂದಿನ ಐದು ದಿನಗಳಲ್ಲಿ ಜಿಲ್ಲಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ರೀತಿಯ ಮಳೆ ಇದೇ ರೀತಿ ಮುಂದುವರೆದರೆ ಬೆಳೆಗಳ ಎಲೆಗಳು ಹಳದಿ ವರ್ಣಕ್ಕೆ ತಿರುಗಿ, ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಹಾವಳಿ ಹೆಚ್ಚಾಗಿ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ 5 ದಿನಗಳಲ್ಲಿ ಮಳೆ ಸಂಭವಿಸುವುದರ ಪರಿಣಾಮವಾಗಿ ರೈತರು ತಮ್ಮ ಕೃಷಿ ಚಟುವಟಿಕೆಗಳಾದ, ಬಿತ್ತನೆ ಮಾಡುವುದು, ಗೊಬ್ಬರ ನೀಡುವುದು ಹಾಗು ರೋಗ ಹಾಗೂ ಕೀಟನಾಶಕಗಳ ಸಿಂಪರಣೆಯನ್ನು ಮುಂದೂಡಬೇಕೆಂದು ಕೃಷಿ ಹವಾಮಾನ ತಜ್ಞೆ ಶ್ರೀಮತಿ ಸ್ಡಾತಿ ಜಿ.ಆರ್. ಅವರು ತಿಳಿಸಿದ್ದಾರೆ.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರ
ವಿಷಯ ತಜ್ಞರು (ಕೃಷಿ ಹವಾಮಾನ ಶಾಸ್ತ್ರ ), ಜಿಲ್ಲಾ ಕೃಷಿ ಹವಾಮಾನ ಘಟಕ,
ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರ