ಎ.ಪಿ.ಎಂ.ಸಿ. ಜಾಗದ ಸಮಸ್ಯೆ ಹಾಗೂ ಹಾಲು ಒಕ್ಕೂಟದ ನೇಮಕಾತಿ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ರೈತರ ನಿದ್ದೆಗೆಡಿಸುತ್ತಿರುವ ನಕಲಿ ಬಿತ್ತನೆ ಬೀಜ, ಕೀಟನಾಶಕ, ನಿಯಂತ್ರಣಕ್ಕೆ ಪ್ರಭಲ ಬೀಜ ಕಾನೂನು ಜಾರಿ ಮಾಡಬೇಕೆಂದು ರೈತ ಸಂಘದಿಂದ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಏಷ್ಯಾದಲ್ಲೇ ಅತಿ ದೊಡ್ಡ ಎರಡನೇ ಮಾರುಕಟ್ಟೆಯನ್ನು ಪ್ರಸಿದ್ದಿ ಪಡೆದಿರುವ ಎ.ಪಿ.ಎಂ.ಸಿ. ಅಭಿವೃದ್ದಿಗೆ ಅವಶ್ಯಕತೆ ಇರುವ 100 ಎಕರೆ ಜಮೀನನ್ನು 10 ವರ್ಷಗಳಿಂದ ಹುಡುಕಾಡಿದರೂ ಕಂದಾಯ ಮತ್ತು ಸರ್ವೆ ಅಧಿಕಾರಿಗಳಿಗೆ ಜಾಗ ಸಿಗುತ್ತಿಲ್ಲ. ಮತ್ತೊಂದಡೆ ಇನ್ನೇನು ಕಡತ ಸರ್ಕಾರದ ಮಟ್ಟದಲ್ಲಿ ಇದೆ ಎಂದು ಜಿಲ್ಲೆಯ ರೈತರಿಗೆ ಜನ ಪ್ರತಿನಿಧಿಗಳು ಜಿಲ್ಲಾಡಳಿತ ರಾತ್ರಿ ಕಾಣುವ ನಕ್ಷತ್ರಗಳನ್ನು ಹಗಲು ವೇಳೆ ತೋರಿಸುತ್ತಿದ್ದಾರೆಂದು ಮಾನ್ಯ ಮುಖ್ಯ ಮಂತ್ರಿಗಳಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಾಗದ ಸಮಸ್ಯೆ ಬಗ್ಗೆ ದೂರು ನೀಡಿದರು.
ಸಾವಿರಾರು ಹೆಕ್ಟೆರ್ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಶ್ರೀಮಂತ ಭೂಗಳ್ಳರ ಒತ್ತುವರಿ ತೆರೆವುಗೊಳಿಸಲು ಅರಣ್ಯ ಸಚಿವರ ಮುಖಾಂತರ ಅರಣ್ಯಾಧಿಕಾರಿಗಳಿಗೆ ಸೂಚಿಸಿ ಕಾನೂನಿನಲ್ಲಿ ಬಡವರಿಗೆ ಶ್ರೀಮಂತರಿಗೆ ಒಂದೇ ನ್ಯಾಯ ಎಂದು ಸಾಬೀತು ಮಾಡಬೇಕೆಂದು ದೂರು ನೀಡಿದರು,
ಪ್ರತಿ ವರ್ಷ ಟೆಮೊಟೋ ಆವಕ ಪ್ರಾರಂಭವಾದಾಗ ಮಳೆ ಬಂದರೆ ಬಿಸಲು ಇದ್ದರೆ, ವ್ಯಾಪಾರಸ್ಥರು ಜಾಗದ ಸಮಸ್ಯೆ ಮುಂದೆ ಇಟ್ಟುಕೊಂಡು ಪ್ರತಿ ಬಾಕ್ಸ್ನ ಮೇಲೆ ಕನಿಷ್ಠ 200 ರೂಪಾಯಿ ಕಡಿಮೆ ಹರಾಜು ಮಾಡುತ್ತಿರುವುದರಿಂದ ರೈತರು ಮೂರು ತಿಂಗಳು ಕಷ್ಟಾಪಟ್ಟು ಬೆಳೆದ ಬೆಳೆ ಜಾಗದ ಸಮಸ್ಯೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಜಾಗದ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ 100 ಎಕರೆ ಜಮೀನು ಮಂಜೂರು ಮಾಡಿ ಅಭಿವೃದ್ದಿ ಮಾಡಿ, ರೈತರು ವ್ಯಾಪಾರಸ್ಥರು ದಲ್ಲಾಳರ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಕೆ.ಸಿ.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ದೀಕರಣ ಮಾಡಿ 5 ವರ್ಷಗಳಿಂದ ರೈತರ ನಿದ್ದೆಗೆಡಿಸುತ್ತಿರುವ ಟೆಮೋಟೋ ಕ್ಯಾಪ್ಸಿಕಂಗೆ ಬಾದಿಸುತ್ತಿರುವ ರೋಗಗಳ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ನೀಡದೆ ಆಂಧ್ರ, ತಮಿಳುನಾಡಿನಲ್ಲಿ ನಿಷೇದವಾಗಿರುವ ನಕಲಿ ಔಷಧಿಗಳು, ಬಿತ್ತನೆ ಬೀಜಗಳನ್ನು ರಾಜಾರೋಷವಾಗಿ ಕಾನೂನಿನ ಭಯವಿಲ್ಲದೆ ಜಿಲ್ಲೆಯಲ್ಲಿ ಮಾರಾಟ ಮಾಡಿ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ನಕಲಿ ಕಂಪನಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ರಾಜ್ಯದಲ್ಲಿ ಬೀಜ ಕಾಯ್ದೆ ಜಾರಿ ಮಾಡಬೇಕೆಂದು ಒತ್ತಾಯ ಮಾಡಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಲಕ್ಷಾಂತರ ರೈತ ಮಹಿಳೆಯರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿನೇ ದಿನೇ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟು ನೇಮಕಾತಿಯಿಂದ ಹಿಡಿದು ಹಾಲಿನ ಬೆಲೆ ನೀಡುವವರೆಗೂ ಭ್ರಷ್ಟಾಚಾರ ತುಂಬಿ ತುಳುಕುವ ಜೊತೆಗೆ ಕಷ್ಟಾಪಟ್ಟು ರಾತ್ರಿ ಹಗಲು ಓದಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳನ್ನು ಕಡೆಗಣಿಸಿ ಹುದ್ದೆಗಳಿಗೆ ಲಕ್ಷ ಲಕ್ಷ ಲಂಚ ಪಡೆದು ಕುರಿಗಳಂತೆ 81 ಅಭ್ಯರ್ಥಿಗಳಿಗೆ ಅಕ್ರಮ ನೇಮಕಾತಿ ಮಾಡಿ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಲು ಕಾನೂನು ಅಡ್ಡಿ ಹೇಳುತ್ತಿರುವ ಅಧ್ಯಕ್ಷರು ಮತ್ತು ನಿರ್ದೇಶಕರ ವಿರುದ್ದ ಕ್ರಮಕೈಗೊಂಡು ಆಡಳಿತ ಮಂಡಳಿಯನ್ನು ರದ್ದು ಮಾಡಿ ನೊಂದ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲು ಪ್ರಕರಣವನ್ನು ಸಿ.ಬಿ.ಐಗೆ ಒಪ್ಪಿಸಬೇಕೆಂದು ಒತ್ತಾಯ ಮಾಡಿದರು.
ರೈತರು ಬರ ಬರಲಿ ಪರಿಹಾರ ಸಿಗುತ್ತದೆಂದು ರೈತ ವಿರೋದಿ ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರವರನ್ನು ಸಂಪುಟದಿಂದ ಕೈಬಿಡದೆ ಇದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ದೂರಿನಲ್ಲಿ ನೀಡಿದರು.
ಗಡಿಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣವಿಲ್ಲದೆ ರೈತರ ಬೆಳೆ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದ್ದು ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಿ 25 ಲಕ್ಷ ಬೆಳೆ ಹಾಗೂ ಪ್ರಾಣ ಹಾನಿ ಪರಿಹಾರ ನೀಡಿ ಕಾಡಾನೆಗಳ ಹಾವಳಿ ತಪ್ಪಿಸದ ಅರಣ್ಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ಸೋಲಾರ್ ಅಳವಡಿಕೆಯಲ್ಲಿ ನಡೆದಿರುವ ಹಗರಣವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಮುಖ್ಯ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ , ಮುನಿಕೃಷ್ಣ, ಮಂಗಸಂದ್ರ ತಿಮ್ಮಣ್ಣ, ನರಸಿಂಹಯ್ಯ, ಯಾರಂಘಟ್ಟ ಗಿರೀಶ್, ಕದರಿನತ್ತ ಅಪ್ಪೋಜಿರಾವ್, ಗೋವಿಂದಪ್ಪ, ಯಲುವಳ್ಳಿ ಪ್ರಭಾಕರ್, ಜಯಣ್ಣ, ಮುಂತಾದವರು ಇದ್ದರು.