ಕುಂದಾಪುರ (ಎ.13) : ಇಂದಿನ ಮಕ್ಕಳು ಕ್ರಿಯಾಶೀಲರಾಗಬೇಕಾದರೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವು ಬಹುಮುಖ್ಯ, ದೇಹ ಮತ್ತು ಮನಸ್ಸನ್ನು ಸದೃಢವಾಗಿರಿಸಿಕೊಳ್ಳಬೇಕಾದರೆ ದೈಹಿಕ ಚಟುವಟಿಕೆಗಳು ಅತಿ ಮುಖ್ಯ. ಅದು ಇಂತಹ ಕ್ಯಾಂಪ್ ಗಳಿಂದ ಸಾಧ್ಯ ಎಂದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಶುಭೋದ್ ಶೆಟ್ಟಿ ಹೇಳಿದರು. ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳು ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಬೇಸಿಗೆ ಶಿಬಿರದ 9ನೇ ದಿನವಾದ ಹಾಲಾಡಿಯ ಮುದೂರಿನ ಕೆಸರುಗದ್ದೆಯಲ್ಲಿ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್ನೋರ್ವ ಅತಿಥಿ ಸಿವಿಲ್ ಇಂಜಿನಿಯರ್ ರೂಪೇಶ್ ಶೆಟ್ಟಿಯವರು ಮಾತನಾಡುತ್ತಾ ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆ ಮತ್ತು ಕುಂದಗನ್ನಡದಲ್ಲಿ ಮರೆಯಾಗುತ್ತಿರುವ ಕೆಲವು ಪದಗಳನ್ನು ನೆನಪಿಸಿದರು.
ಶ್ರೀಮತಿ ಸುಶೀಲ ಚಂದ್ರಶೇಖರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಹಳ್ಳಿ ಹಾಡುಗಳನ್ನು ಹಾಡಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಲೋಚನ ಶೆಟ್ಟಿಯವರು ತಾವು ಕುಂದಾಪುರ ಕನ್ನಡದಲ್ಲಿ ರಚಿಸಿರುವ ಸ್ವರಚಿತ ಕವಿತೆಯನ್ನು ಹಾಡಿ ವಿದ್ಯಾರ್ಥಿಗಳ ಮನಸ್ಸನ್ನು ಸೂರೆಗೊಳ್ಳುವಂತೆ ಮಾಡಿದರು. ಬಳಿಕ ವಿದ್ಯಾರ್ಥಿಗಳು ದೇಶಿ ಆಟಗಳಾದ ಕುಂಟಬಿಲ್ಲೆ, ಲಗೋರಿ, ಚೆನ್ನಿಮಣಿ, ಕಪ್ಪೆಜಿಗಿತವನ್ನು ಆಡಿ ಸಂತೋಷಪಟ್ಟರು. ನಂತರ ಕೆಸರುಗದ್ದೆಯಲ್ಲಿ ವಾಲಿಬಾಲ್, ತ್ರೋಬಾಲ್, ಗೋರಿ ಆಟ, ನಿಧಿ ಶೋಧನೆ ಮುಂತಾದ ಆಟಗಳನ್ನು ಆಡಿ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಜೀವಕಳೆ ತುಂಬಿದರು. ಹಾಲಾಡಿ ವಲಯದ ರಾಜ್ಯಮಟ್ಟದಲ್ಲಿ ವಿಜೇತರಾದ ಹಗ್ಗ ಜಗ್ಗಾಟದ ತಂಡದವರಿಂದ ಹಗ್ಗಜಗ್ಗಾಟ ಪ್ರದರ್ಶನ ನಡೆಯಿತು. ಶಿಕ್ಷಕಿ ಸ್ವಪ್ನಾ ಸತೀಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.