ಕುಂದಾಪುರ: ಮಂಗಳೂರಿನಿಂದ ನಾಗಪುರಕ್ಕೆ ಎಂ ಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಕೋಟೇಶ್ವರ ಸಮೀಪ ಅಂಕದ ಕಟ್ಟೆಯಲ್ಲಿ ಡಿವೈಡರಿಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಬಿದ್ದಿದೆ.
ಮಂಗಳೂರಿನ ಎಂಆರ್ ಪಿಎಲ್ ನಿಂದ ಕಚ್ಚಾ ಸಾಮಗ್ರಿಗಳನ್ನು ಮಹಾರಾಷ್ಟ್ರದ ನಾಗಪುರಕ್ಕೆ ಸಾಗಿಸುತ್ತಿದ್ದ 17 ಚಕ್ರದ ಲಾರಿ ಇಂದು ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಚೀಲಗಳೆಲ್ಲ ಸರ್ವಿಸ್ ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದೆ.
ಅಪಘಾತದಲ್ಲಿ ಚಾಲಕ ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗಿನ ಜಾವ ರಸ್ತೆ ಸಂಚಾರ ವಿರಳವಾಗಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ಬೇರೆ ಯಾವುದೇ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದ್ದರೆ ಪ್ರಾಣಕ್ಕೆ ಕಂಟಕವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.