ಮಂಗಳೂರು: ಎಲ್ಲಾ ಧರ್ಮಗಳ ಭೋದನೆಗಳು ಸತ್ಯದ ಹಾದಿಯಲ್ಲಿದ್ದು,ಮನುಷ್ಯ ಕುಲದ ಏಳಿಗೆಗಾಗಿ ಅವುಗಳು ಶ್ರಮಿಸುತ್ತಿದೆಯೇ ಹೊರತು ಮನುಕುಲದ ನಾಶಕ್ಕಾಗಿ ಅಲ್ಲ.ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿ,ಸಮಾಜದಲ್ಲಿ ದ್ವೇಷಪೂರಿತ ವಾತಾವರಣವನ್ನು ಸ್ರಷ್ಠಿಸಿ ತಮ್ಮ ಬೇಳೆಯನ್ನು ಬೇಯಿಸುತ್ತಿದ್ದಾರೆ. ಸಮಾಜದಲ್ಲಿ ಇಂತಹ ಕಂದಕ ಸ್ರಷ್ಠಿಸುವವರನ್ನು ಹಿಮ್ಮೆಟ್ಟಿಸಬೇಕಾದರೆ ಸರ್ವ ಧರ್ಮಗಳ ಜನತೆ ಒಂದುಗೂಡುವ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ* ಎಂದು ಸುನ್ನಿ ವಿದ್ವಾಂಸರೂ,SYS ಜಿಲ್ಲಾ ಉಪಾಧ್ಯಕ್ಷರಾದ ಬಹುಮಾನ್ಯ ಬಶೀರ್ ಮದನಿಯವರು ಅಭಿಪ್ರಾಯಪಟ್ಟರು.
ಸಂತ ಮದರ್ ತೆರೇಸಾ ವಿಚಾರ ವೇದಿಕೆ ಹಾಗೂ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವ್ರದ್ದಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ,ಸರ್ವ ಧರ್ಮಗಳ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ನಗರದ ಪುರಭವನದಲ್ಲಿ ಜರುಗಿದ ಸೌಹಾರ್ದ ಇಫ್ತಾರ್ ಕೂಟ – 2024 ಕಾರ್ಯಕ್ರಮದಲ್ಲಿ ತಮ್ಮ ಸೌಹಾರ್ದ ಸಂದೇಶ ಸಾರುವ ಮೂಲಕ ಅವರು ಈ ಮಾತುಗಳನ್ನು ಹೇಳಿದರು.
CSI ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಹೇಮಚಂದ್ರ ಕುಮಾರ್ ರವರು ಮಾತನಾಡುತ್ತಾ, *ಇಫ್ತಾರ್ ಕೂಟವು ನಿಜಕ್ಕೂ ಸೌಹಾರ್ದದ ಸಂದೇಶ ಸಾರುವ ಆಚರಣೆಯಾಗಿದೆ. ಮಾತ್ರವಲ್ಲ ಭಾಂಧವ್ಯದ ಸಂಕೇತವಾಗಿದೆ. ಒಬ್ಬರನ್ನೊಬ್ಬರನ್ನು ಪರಸ್ಪರ ಗೌರವಿಸಲು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಬೇಕಾಗಿದೆ* ಎಂದು ಹೇಳಿದರು.
ಸಾಮಾಜಿಕ ಚಿಂತಕರಾದ ಡಾ.ಕೆ.ಪ್ರಕಾಶ್ ರವರು ಮಾತನಾಡಿ, *ಜಗತ್ತಿನ 126 ದೇಶಗಳ ಪೈಕಿ ಭಾರತದ ಹಸಿವಿನ ಸೂಚ್ಯಂಕವು 114ನೇ ಸ್ಥಾನದಲ್ಲಿದೆ. ದೇಶದಲ್ಲಿ ಹಸಿವಿನ ಹೆಚ್ಚಳದ ಜೊತೆಗೆ ಅಸಮಾನತೆಯೂ ಹೆಚ್ಚುತ್ತಿದೆ,ಸೌಹಾರ್ದತೆ ಕಡಿಮೆಯಾಗುತ್ತಿದೆ* ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಬಿ.ಎ.ನಾಸಿರ್ ಲಕ್ಕಿಸ್ಟಾರ್,ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸ್ಟಾನಿ ಅಲ್ವಾರೀಸ್,ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್, ಅಧ್ಯಕ್ಷರಾದ ಮಹಮ್ಮದ್ ಮುಸ್ತಾಫ,ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿಯವರು ಉಪಸ್ಥಿತರಿದ್ದರು. ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಬಳಿಕ ಕಾರ್ಯಕ್ರಮವನ್ನು ನಿರೂಪಿಸಿದರು.