ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ವತಿಯಿಂದ ವಿಎಲ್ಎಸ್ಐ ಸಿಸ್ಟಮ್ ವಿನ್ಯಾಸ ಎಂಬ ವಿಷಯದ ಬಗ್ಗೆ ಒಂದು ದಿನದ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಸಿಐಯೆಂಟ್ ಸೆಮಿಕಂಡಕ್ಟರ್ ಇದರ ಪ್ರೋಗ್ರಾಮ್ ಮ್ಯಾನೇಜರ್ ಆಗಿರುವ ರಿಝ್ವಾನ್ ರೋಶನ್ ಹಾಗೂ ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕರಾದ ದಿಲೀಪ್ ಮೊಗವೀರ ಇವರು ಆಗಮಿಸಿದ್ದು ವಿಧ್ಯಾರ್ಥಿಗಳಿಗೆ ಕಾರ್ಯಗಾರ ನಡೆಸಿಕೊಟ್ಟರು. ಸೆಮಿಕಂಡಕ್ಟರ್ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ತಿಳಿಸುತ್ತ, ಚಿಪ್ ತಯಾರಿಸುವ ಬಗೆ, ಸೆಮಿಕಂಡಕ್ಟರ್ ಕಂಪೆನಿಯಲ್ಲಿನ ಅವಕಾಶಗಳನ್ನು ಸವಿವರವಾಗಿ ತಿಳಿಸಿಕೊಟ್ಟರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು ಮುಂದಿನ ಹತ್ತು ವರ್ಷಗಳಲ್ಲಿ ಸೆಮಿಕಂಡಕ್ಟರ್ ತಂತ್ರಜ್ಞಾನ ಯಾವ ಮಟ್ಟದಲ್ಲಿ ಅಭಿವೃದ್ಧಿ ಹೊಂದಲಿದೆ ಹಾಗೂ ಅತಿಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದೆ ಹಾಗಾಗಿ ಎಲೆಕ್ಟ್ರಾನಿಕ್ ವಿಭಾಗವನ್ನು ಆಯ್ಕೆ ಮಾಡಿದ ನೀವು ಅದರ ಬಗ್ಗೆ ಹೆಮ್ಮೆಯಿಂದ ಇರಬೇಕು ಹಾಗು ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಬೇಕು ಎಂದು ವಿಧ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್, ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಬಾಲನಾಗೇಶ್ವರ್, ಆರ್ಟಿಫ಼ಿಶಿಯಲ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫ಼ೆಸರ್ ವರುಣಕುಮಾರ್, ಸಿಬ್ಬಂದಿ ವರ್ಗ, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಾಧ್ಯಾಪಕಿ ಸುಷ್ಮ ಶೆಟ್ಟಿ ಸ್ವಾಗತಿಸಿ , ವಿಧ್ಯಾರ್ಥಿನಿ ಸಿಂಚನ ದೇವಾಡಿಗ ವಂದಿಸಿ , ಫ಼ಾತಿಮ ನಿರೂಪಿಸಿದರು.