ಕೋಲಾರ,ಆ.10: ಬರೆಯುವಾಗ ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ಸುದ್ದಿಯ ಸ್ಪಷ್ಟತೆ ಇಲದಿದ್ದರೆ ಓದುಗರಿಗೆ ತಪ್ಪು ಮಾಹಿತಿ ನೀಡುವಂತಾಗುತ್ತದೆ. ನಮ್ಮ ಬರವಣೆಗೆಯ ಮೇಲೆ ನಮಗೆ ಹಿಡಿತ, ಪರಿಪಕ್ವತೆ ಇದ್ದಾಗ ಮಾತ್ರ ಓದುಗರಿಗೆ ಉತ್ತಮ ಸುದ್ಧಿಗಳನ್ನು ನೀಡಲು ಸಾಧ್ಯ ಎಂದು ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಭವನದಲ್ಲಿ ಗುರುವಾರ ಮನ್ವಂತರ ಪ್ರಕಾಶನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೋಲಾರ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಮಾಧ್ಯಮ ಕ್ಷೇತ್ರಕ್ಕೆ ಸೇರಲು ಆಸಕ್ತಿಯುಳ್ಳ ಯುವಕ ಯುವತಿಯರಿಗೆ ನಾಲ್ಕು ದಿನಗಳ ಉಚಿತ ಕಲಿಕೆ ಮತ್ತು ಕೌಶಲ್ಯ ತರಬೇತಿ ಶಿಬಿರದ 2ನೇ ದಿನದ ಕಾರ್ಯಾಗಾರದಲ್ಲಿ ಭಾವಹಿಸಿ ಅವರು ಮಾತನಾಡುತ್ತಿದ್ದರು.
ಒಬ್ಬ ವ್ಯಕ್ತಿ ಅನೇಕ ವಿಚಾರಗಳನ್ನು ಮಾತನಾಡುತ್ತಾನೆ. ಮೊದಲ ಪ್ಯಾರಾ ಯಾವುದನ್ನು ಆಯ್ಕೆ ಮಾಡಿಕೊಳ್ಳುತೀರಿ ಎಂಬುವುದು ಸವಾಲಿನ ಕೆಲಸ. ಅಲ್ಲಿ ಸಾಮನ್ಯ ಜ್ಞಾನ, ನೀವು ಓದಿರುವ ಪುಸ್ತಕಗಳು, ಪಠ್ಯದಲ್ಲಿರುವ ವಿದ್ಯೆ, ಜೀವನದ ಅನುಭವ, ಹಿರಿಯರಿಂದ ಕಲಿತ ವಿಚಾರಗಳೆಲ್ಲವೂ ನಮ್ಮ ಪರಿಗಣೆನೆಗೆ ಬರುತ್ತದೆ. ಇದರಿಂದ ನೀವು ಒಳ್ಳೆಯ ಮೊದಲ ಪ್ಯಾರಾ ಸುದ್ಧಿ ನೀಡಲು ನೆರವಾಗುತ್ತದೆ ಎಂದರು.
ಪತ್ರಕರ್ತರು ಮೊದಲ ಪ್ಯಾರದಲ್ಲಿ ಸುದ್ಧಿಯ ಸಾರವನ್ನು ಅರ್ಥಗರ್ಭಿತವಾಗಿ ನೀಡುವುದನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಜಾಣತನವನ್ನು ತೋರಿದಾಗ ಮಾತ್ರ ಓದುಗರ ಮನಮುಟ್ಟುವಂತ ಸುದ್ಧಿಗಳನ್ನು ನೀಡಲು ಸಾಧ್ಯ ಎಂದರು.
ಪರಿಸರ ಲೇಖಕ ಹಾಗೂ ವಿಜ್ಞಾನ ಚಿಂತಕ ಪುರುಷೋತ್ತಮರಾವ್ ಮಾತನಾಡಿ, ಆಸಕ್ತಿಯಿದ್ದರೆ ಮಾತ್ರ ಪತ್ರಿಕೋದ್ಯಮಕ್ಕೆ ಬನ್ನಿ. ಮನಷತ್ವ ಬಹಳ ಮುಖ್ಯ. ಪತ್ರಿಕೋದ್ಯಮವು ಜವಾಬ್ದಾರಿಯುತ ಸ್ಥಾನವಾಗಿದೆ. ಸುದ್ಧಿ ಬರೆಯುವ ಮುನ್ನ ವಿವೇಚನೆಯಿಂದ ಯಾವುದು ಬೇಕು, ಯಾವುದು ಬೇಡ ಎಂಬ ಮಾನದಂಡವಿರಬೇಕು. ದಿನನಿತ್ಯ ನಡೆಯುವ ಆಗುಹೋಗುಗಳ ಬಗ್ಗೆ ಮತ್ತು ಜನರ ಸಮಸ್ಯೆಗಳ ಬಗ್ಗೆ ಸುದ್ದಿಗಳನ್ನು ನೀಡಬೇಕು. ಒಳ್ಳೆಯ ಜ್ಞಾನವಿದ್ದರೆ, ಉತ್ತಮ ಸುದ್ಧಿಗಳನ್ನು ಬರೆಯುತ್ತಿದ್ದರೆ ಪತ್ರಿಕೆಗಳು ನಮ್ಮನ್ನು ಉತ್ತಮ ವರದಿಗಾರರಾಗಿ ರೂಪಗೊಳಿಸುತ್ತವೆ ಎಂದರು.
ಹಿರಿಯ ಪತ್ರಕರ್ತ ಸಿ.ಎಂ.ಮುನಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಣ ಸಂಪಾದನೆಯೇ ಪತ್ರಿಕೋದ್ಯಮದ ಭಾಗವಾಗಬಾರದು, ನಮ್ಮ ಕಣ್ಣು, ಕಿವಿ ತೆರೆದಿಟ್ಟುಕೊಂಡಿರಬೇಕು. ಆಡು ಮುಟ್ಟದ ಸೊಪ್ಪಿಲ್ಲ. ಪತ್ರಕರ್ತನು ಸಾಧನೆ ಮಾಡದ ಕ್ಷೇತ್ರವಿಲ್ಲ ಎಂಬುದನ್ನು ಅರಿಯಬೇಕೆಂದರು.
ಪತ್ರಕರ್ತನಿಗೆ ಶ್ರದ್ಧೆ ಆಸಕ್ತಿ ಬಹಳ ಮುಖ್ಯ. ಪತ್ರಕರ್ತನಾದವನು ಜಾತ್ಯತೀತ ಧರ್ಮಾತೀತ ಪಕ್ಷಾತೀತವಾಗಿ ಎಲ್ಲಾ ಸಿದ್ಧಾಂತಗಳನ್ನು ತಿಳಿದುಕೊಂಡಿರಬೇಕು. ಪ್ರತಿದಿನ ಒಂದು ಪುಟ ಕನ್ನಡ ಪುಸ್ತಕಗಳನ್ನು ಓದಬೇಕು, ಕಲೆ ಸಾಹಿತ್ಯ ಸಂಗೀತದ ಬಗ್ಗೆ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು, ವಿಶಾಲ ಮನೋಭಾವ ಮತ್ತು ಮನಸ್ಸನ್ನು ಹೊಂದಿರಬೇಕು ಸಮಾಜದ ವೈದ್ಯರಾಗಬೇಕೇ ಹೊರತು ಬರೀ ವೈದ್ಯರ ಆಗಬೇಕೆಂಬುದು ಮನಗಾಣಬೇಕು.
ಮನ್ವಂತರ ಪ್ರಕಾಶನದ ಪಾ.ಶ್ರೀ.ಅನಂತರಾಮ್ ಆಶಯ ನುಡಿಗಳನ್ನಾಡಿದರು. ಟಿ.ಸುಬ್ಬರಾಮಯ್ಯ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಬಾಲನ್, ಆಸೀಫ್, ಎಲ್.ನಿರಂಜನ್ ಉಪಸ್ಥಿತರಿದ್ದರು.