ಕೋಲಾರ:- ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ನಿಯೋಜಿತ ಸಮಿತಿ ಯೂಟೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟ್ಟರ್ ಹಾಗೂ ವ್ಯಾಟ್ಸ್ ಆ್ಯಪ್ಗಳ ಮೇಲೆ ತೀವ್ರ ನಿಗಾ ಇಡಬೇಕು. ಜಾಹೀರಾತು ವೆಚ್ಚ ಕುರಿತು ಸಮಿತಿ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಜಿಲ್ಲಾ ಮಾಧ್ಯಮ ಪರಿಶೀಲನಾ ಕೋಶ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮನವರಿಕೆ ಮಾಡಿಕೊಂಡ ನಂತರವೇ ಸರ್ಟಿಫಿಕೇಟ್ ನೀಡಬೇಕು. ದೃಶ್ಯ ಮಾಧ್ಯಮ, ಪತ್ರಿಕೆಗಳಲ್ಲಿ ಬರುವಂತಹ ಜಾಹೀರಾತಿನ ಮೇಲೆ ತೀವ್ರ ನಿಗಾ ವಹಿಸುವ ಮೂಲಕ ಚುನಾವಣೆ ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಅನುಮತಿಗಾಗಿ ಬರುವ ಪ್ರಸ್ತಾವನೆಗಳನ್ನು ತ್ವರಿತಗತಿಯಲ್ಲಿ ಪರಿಶೀಲನೆ ನಡೆಸಿ, ವಿಲೇವಾರಿ ಮಾಡಬೇಕು. ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಮಾಹಿತಿ ಒದಗಿಸಬೇಕು ಎಂದರು.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪಾವತಿ ಸುದ್ದಿ, ಕಾಸಿಗಾಗಿ ಸುದ್ದಿ ಪ್ರಕಟಿಸುವಂತಿಲ್ಲ. ಈ ಕುರಿತು ತೀವ್ರ ನಿಗಾ ವಹಿಸಬೇಕು. ಮತದಾರರ ಮೇಲೆ ಪ್ರಭಾವ ಬೀರುವ ಸುದ್ದಿಗಳನ್ನು ಪ್ರಕಟಿಸದಂತೆ ಕ್ರಮ ವಹಿಸಬೇಕು. ಬಲ್ಕ್ ಎಸ್ಎಂಎಸ್ ಮೇಲೆ ನಿಗಾ ಇಡಬೇಕು. ಪ್ರತಿದಿನ ಪತ್ರಿಕೆ ಮತ್ತು ಸ್ಥಳೀಯ ಹಾಗೂ ಎಲ್ಲ ಟಿವಿ ಚಾನೆಲ್ ಪ್ರಸಾರವನ್ನು ಗಮನಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಪದ್ಮ ಬಸವಂತಪ್ಪ, ಎಂಸಿಎಂಸಿ ಸಮಿತಿಯ ನೋಡಲ್ ಅಧಿಕಾರಿ ಬಿ.ವಿ.ಚೇತನ್ ಕುಮಾರ್, ಸಾಮಾಜಿಕ ಜಾಲತಾಣ ನಿಗಾ ಕೋಶದ ನೋಡಲ್ ಅಧಿಕಾರಿ ಪ್ರತಿಮಾ, ಮಾಧ್ಯಮ ನಿಗಾ ಕೋಶದಲ್ಲಿ ಕೃಷಿ ಇಲಾಖೆಯ ಕೆ.ಎನ್.ಮಂಜುನಾಥ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪಿ.ಕೌಸಲ್ಯ, ಮಂಜೇಶ, ಸುಧಾ, ಮಧುಪ್ರಸಾದ್, ಭಾರತಿ, ಅಂಬರೀಶ್, ಕವಿತ, ನಂದೀಶ್, ಎಪಿಎಂಸಿ ವಿಜಯಲಕ್ಷ್ಮಿ, ಕೃಷಿ ಇಲಾಖೆಯ ಭವ್ಯರಾಣಿ, ಯಶಸ್ವಿನಿ, ಚೈತ್ರ, ಶೋಭ, ಶ್ರೀನಿವಾಸ ಮತ್ತು ನಟರಾಜ ಸೇರಿದಂತೆ ಅಧಿಕಾರಿ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.