ಶ್ರೀನಿವಾಸಪುರ : ಡಿವಿಜಿ ಬದುಕಿನ ಸರಳ ಹಾಗೂ ಪ್ರಾಮಾಣಿಕತೆಗೆ ಸಾಕ್ಷಿಯಾದ ಕೆಲವು ಘಟನೆಗಳನ್ನು ಉದಾಹರಸಿ, ವಿದ್ಯಾರ್ಥಿಗಳ ಜೀವನಕ್ಕೆ ನೆರವಾಗಿ ಆತ್ಮಸ್ಥೈರ್ಯ ತುಂಬುವ ಕಗ್ಗದ ಕೆಲವು ಪದ್ಯಗಳನ್ನು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಬಿ. ಗೋಪಾಲಗೌಡರು ಹೇಳಿ ವ್ಯಾಖ್ಯಾನಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಿವಾಸಪುರ ಘಟಕದಿಂದ ಡಿವಿಜಿ ಅವರ ಜನ್ಮದಿನೋತ್ಸವದ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಲೇಖಕಿ ಹಾಗೂ ಕದಳಿ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಾಯಾ ಬಾಲಚಂದ್ರ ಮಾತನಾಡಿ ಕಗ್ಗದ ಮಗ್ಗದಲ್ಲಿ ಡಿವಿಜಿ ಅನುಭವ ನೇಯ್ಗೆ” ಉಪನ್ಯಾಸದಲ್ಲಿ ಡಿವಿಜಿ ಸ್ವಾನುಭವ ಮತ್ತು ಸಮಾಜ ದರ್ಶನದ ಅನುಭವದಿಂದ ಹುಟ್ಟಿದ
ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ, ಅವುಗಳ ಅರ್ಥವನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ತಾಲೂಕು ಅಧ್ಯಕ್ಷೆ ಶ್ರೀಮತಿ ಪಿ.ಎಸ್.ಮಂಜುಳ ಮಾತನಾಡಿ ಮಾಸ್ತಿ, ಬೇಂದ್ರೆ, ಕುವೆಂಪು, ಡಿವಿಜಿ ಅಂಥವರ ಜಯಂತಿಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ, ನಮ್ಮ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಆಚರಿಸುತ್ತಾ ಬಂದಿದೆ. ಡಿವಿಜಿ ಅವರು ಪ್ರಶಸ್ತಿ ಹಾಗೂ ಪ್ರಸಿದ್ಧಿ ಹಿಂದೆ ಹೋದವರಲ್ಲ. ಕಗ್ಗ ಜ್ಞಾನಪೀಠ ಪ್ರಶಸ್ತಿ ಬರದಿದ್ದರೇನಂತೆ ಜನಗಳ ಜ್ಞಾನದ ಪೀಠವಾಗಿ ಉಳಿದಿದೆ ಎಂದರು.
ಆಧ್ಯಾತ್ಮ ಸಂಬಂಧಿಸಿದ ಅವರ ಸಾಹಿತ್ಯ ಕೃತಿಗಳಲ್ಲಿನ ಅಂಶಗಳನ್ನೂ ಸಂಕ್ಷಿಪ್ತವಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರಾಣೇಶ್ ಅವರು, ಸರ್ಕಾರಿ ಬಸ್ಸುಗಳಲ್ಲಿ ಡಿವಿಜಿ ಅವರ “ಇರುವ ಭಾಗ್ಯವ ನೆನೆದು ಬಾರೆನೆಂಬುದು ಬಿಡು ಹರುಕ್ಕಿದೆ ದಾರಿ” ಎಂಬ ವಾಕ್ಯವನ್ನು ನೀವು ನಾಮಫಲಕದಲ್ಲಿ ನೋಡಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ, ಡಿವಿಜಿ ಅವರ ಇಂತಹ ಕಾವ್ಯದ ಆದರ್ಶವನ್ನು ಪಾಲಿಸಬೇಕು ಎಂದರು.
ಸಾಹಿತಿ ಪಣಸಮಾಕನಹಳ್ಳಿ ಚೌಡರೆಡ್ಡಿ, ಉಪನ್ಯಾಸಕರಾದ ಎನ್. ಶಂಕರೇಗೌಡ, ಕೆ.ಎನ್. ಮಂಜುನಾಥ ರೆಡ್ಡಿ, ಜಿ.ಕೆ.ನಾರಾಯಣಸ್ವಾಮಿ, ಎನ್. ವಾಸು, ಶ್ರೀಧರ್, ಶ್ರೀಮತಿ ಜಯಲಕ್ಷ್ಮಿ ಹಾಗೂ ವಿದ್ಯಾರ್ಥಿನಿಯರು ಇದ್ದರು.