ಅತ್ತೂರು ಕಾರ್ಕಳ ಪವಾಡ ಪುರುಷ ಸಂತ ಲಾರೆನ್ಸ್ ಬಸಿಲಿಕದ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದ ಭಕ್ತಿ ಕಾರ್ಯಗಳು ಅತ್ಯಂತ ಸುಸೂತ್ರವಾಗಿ ನೆರವೇರಿತು. ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ ‘ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು’ ಎಂಬ ಹಬ್ಬದ ದಿನದ ವಿಷಯವನ್ನು ಧ್ಯಾನಿಸಲಾಯಿತು. ದೈನಂದಿನ ಜೀವನದಲ್ಲಿ ಕೇಳುವ ಬಯಕೆ ನಮ್ಮದಾದಾಗ ನೀಡುವ ಆಶಯ ತಂದೆ ದೇವರದ್ದಾಗಿರುತ್ತದೆ. ಪ್ರಾರ್ಥನೆಯ ಮೂಲಕ ಕೇಳುವ ನಮ್ಮ ಅತ್ಯಗತ್ಯಗಳನ್ನು ದೇವರು ಸಕಾಲಕ್ಕೆ ಒದಗಿಸುವುರು. ಮನುಜರಾದ ನಾವು ಕೇಳುವ ಗುಣವನ್ನು ಶ್ರತಪಡಿಸಿದಾಗ ಅದರ ಫಲ ಖಂಡಿತವಾಗಿಯೂ ಲಭಿಸುತ್ತದೆ.
ಜನಸಾಗರ ಪುಣ್ಯಕ್ಷೇತ್ರದ ವಠಾರದ ಸುತ್ತಮುತ್ತ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಒಂದಾದರು. ಪಾಲಕ ಸಂತ ಲಾರೆನ್ಸರ ಸಮುಕದಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು. ಪವಾಡ ಮೂರ್ತಿಯ ಬಳಿ ಸಾಲು ನಿಂತು ಭಕ್ತಿಪರವಶೆಯಿಂದ ಪ್ರಾರ್ಥನೆಯಲ್ಲಿ ಮಗ್ನರಾದರು.
ಜನವರಿ 24 ರಂದು ಸಂತ ಲಾರೆನ್ಸರ ದೇವಾಲಯದ ಒಳಗಿನ ದಿವ್ಯ ಸಂಪುಟದ ಬಳಿ ಧಾವಿಸಿ ಪ್ರಾರ್ಥಿಸಿದರು. ದಿವ್ಯ ಬಲಿಪೀಠದ ಮೇಲೆ ತಮ್ಮ ಪುಟ್ಟ ಮಕ್ಕಳನ್ನು ಕುಳ್ಳಿರಿಸಿ ಹರಕೆಯನ್ನು ತೀರಿಸಿದರು. ಜಲ ತೀರ್ಥ ಹಾಗೂ ಪುಷ್ಪ ತೀರ್ಥವನ್ನು ಭಕ್ತಜನಸಾಗರ ಭಾವನಾತ್ಮಕವಾಗಿ ಭಕ್ತಿಯಿಂದ ಸ್ವೀಕರಿಸಿದರು. ಪವಾಡ ಮೂರ್ತಿಯ ದಿವ್ಯ ಪ್ರಸನ್ನತೆಯನ್ನು ಕಂಡ ಭಕ್ತಜನರು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿದರು. ಅಂತೆಯೇ ಲೂಕನ ಶುಭಸಂದೇಶದಿಂದ ಆರಿಸಲ್ಪಟ್ಟಂತಹ ದೈವವಾಕ್ಯ ‘ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು’ ಪ್ರವಚನಕ್ಕೆ ಆರಿಸಲ್ಪಟ್ಟ ಪ್ರಮುಖ ಧ್ಯಾನದ ವಿಷಯವಾಗಿತ್ತು.
ವಾರ್ಷಿಕ ಮಹೋತ್ಸವದ ಪ್ರಮುಖ ಸಾಂಭ್ರಾಮಿಕ ಆಡಂಭರದ ಗಾಯನ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಂದತಹ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೊ ನೆರವೇರಿಸಿ ನಾವು ನಮ್ಮ ಶ್ವಾಸವನ್ನು ಆಗಿಂದಾಗೆ ಶ್ವಾಶಿಸುವಾಗ ದೇವರನ್ನು ಆಗಿಂದಾಗೆ ಜ್ಪಾಪಿಸಿಕೊಳ್ಳಬೇಕು. ಭರವಸೆಯಿಂದ ಹಾಗೂ ನಂಬಿಕೆಯಿಂದ ಕೂಡಿದ ನಮ್ಮ ಪ್ರಾರ್ಥನೆ ಫಲಭರಿತಾಗುವುದು. ನಮ್ಮ ಜೀವನದಲ್ಲಿ ಪಾರ್ಥನೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ನಮ್ಮ ಕುಟುಂಬ ಪ್ರಾರ್ಥನಾ ಮಂದಿರವಾಗಬೇಕು. ಪ್ರಾರ್ಥನೆಯನ್ನು ಜೀವನದಿಂದ ಬೇರ್ಪಡಿಸಲು ಅಸಾಧ್ಯ. ಪ್ರಾರ್ಥನೆ ಶಕ್ತಿಯುತ ಸಾಧನ. ಸ್ವರ್ಗದ ದ್ವಾರವನ್ನು ತೆರೆಯುವಂತಹ ಕೈಬೀಗ ಆದಾಗಿದೆ ಎಂದು ಅರ್ಥಗರ್ಭಿತ ಪ್ರಬೋಧನೆಯನ್ನು ನೀಡಿದರು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ಜಾನ್ ವಾಸ್, ಫಾದರ್ ಮುಲ್ಲರ್ ಮಂಗಳೂರು, ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೊ ಉಡುಪಿಯ ಧರ್ಮಾಧ್ಯಕ್ಷರು, ವಂದನೀಯ ಆಲ್ಬರ್ಟ್ ಕ್ರಾಸ್ತಾ, ಗಂಗೊಳ್ಳಿ, ವಂದನೀಯ ಪ್ರದೀಪ್ ಕರ್ಡೋಜಾ, ಮೂಡುಬೆಳ್ಳೆ, ವಂದನೀಯ ಫ್ರಾನ್ಸಿಸ್ ಮಿನೆಜಸ್, ಗುಲ್ಬರ್ಗಾ, ವಂದನೀಯ ರಾಬರ್ಟ್ ಕ್ರಾಸ್ತಾ, ಗುಲ್ಬರ್ಗಾ, ವಂದನೀಯ ಲೆಸ್ಲಿ ಡಿ’ಸೋಜ, ಶಿರ್ವಾಂ, ವಂದನೀಯ ಆಲ್ಬನ್ ಡಿ’ಸೋಜ, ಅತ್ತೂರು ಪುಣ್ಯಕ್ಷೇತ್ರ, ವಂದನೀಯ ರೋಯ್ ಲೋಬೊ, ಉಡುಪಿ ಇವರುಗಳು ಅರ್ಪಿಸಿದರು.
ವಿವಿಧ ಸ್ಥಳಗಳಿಂದ, ವರನಾಡಿನಿಂದ ವಿದೇಶಿಯರು ಹಾಗೂ ಊರ ಮೂಲೆಮೂಲೆಗಳಿಂದ ಹಲವಾರು ಜನರು ಜಾತಿ ಭೇದವಿಲ್ಲದೆ ಹಬ್ಬದ ಸಂಭ್ರಮವನ್ನು ವೀಕ್ಷಿಸಲು, ಭಕ್ತಿಯಾಚರಣೆಗಳಲ್ಲಿ ಪಾಲ್ಗೊಳ್ಳಲು ಧಾವಿಸಿದರು. ಅಂತೆಯೇ ತಮ್ಮ ಹರಕೆಯ ಮೊಂಬತ್ತಿಯನ್ನು ಬೆಳಗಿಸಿದರು. ಪುಣ್ಯಕ್ಷೇತ್ರದ ತೈಲವನ್ನು ಸ್ವೀಕರಿಸಿ ಪವಿತ್ರ ಪುಪ್ಕರಣಿಯ ಸನ್ನಿಧಿ ಧಾವಿಸಿ ತೀರ್ಥವನ್ನು ಪಡೆದು, ದೀರ್ಘ ವಿಶೇಷ ಪ್ರಾರ್ಥನೆ ಹಾಗೂ ಬಸಿಲಿಕದ ಮಹಾನ್ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯದ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು.
ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 10 ಗಂಟೆಗೆ ನೆರವೇರಿಸಿ ಮಹೋತ್ಸವದ ನಾಲ್ಕನೇ ದಿನದ ಬಲಿಪೂಜೆಗಳನ್ನು, ಧಾರ್ಮಿಕ ಭಕ್ತಿ-ಆಚರಣೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಭಕ್ತಿಯುತವಾಗಿ ನೇರವೇರಿಸಿ ಮುಕ್ತಾಯಗೊಳಿಸಲಾಯಿತು.