ಹಂಗಾರಕಟ್ಟೆ : ಯಕ್ಷಗಾನ ಕವಿ ಪ್ರಸಂಗಕರ್ತ ಶಿರೂರು ಫಣಿಯಪ್ಪಯ್ಯ ಅವರ ಪ್ರಸಂಗ ಪುಸ್ತಕ ಸಂಪುಟ ಬಿಡುಗಡೆ ಕಾರ್ಯಕ್ರಮ 09 12 2023 ಶನಿವಾರ ಸಂಜೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ನಡೆಯಿತು. ಶಿರೂರು ಫಣಿಯಪ್ಪಯ್ಯ ವಿರಚಿತ ಜನಪ್ರಿಯ ಪ್ರಸಂಗ ಶ್ರೀ ಕೃಷ್ಣಗಾರುಡಿ, ಮಹೇಂದ್ರ ವಿಜಯ, ಮುನ್ನೂರು ವರ್ಷಗಳ ಹಿಂದಿನ ಹಟ್ಟಿಯಂಗಡಿ ರಾಮ ಭಟ್ ವಿರಚಿತ ಬಿಲ್ಲಹಬ್ಬ ಮತ್ತು ಕಂಸವಧೆ, ರತ್ನಪುರದ ರಾಮ ಕವಿಯ ಮೂಲಕಾಸುರ ಕಾಳಗ ಪ್ರಸಂಗಗಳನ್ನು ಒಳಗೊಂಡ ಫಣಿಗಿರಿ ಯಕ್ಷಸಂಪುಟ ಹಾಗೂ ಕ ಪು ಸೀತಾರಾಮ ಕೆದಿಲಾಯ ವಿರಚಿತ ಶಲ್ಯಪರ್ವ- ಗದಾಪರ್ವ ಯಕ್ಷಗಾನ ಕೃತಿಗಳನ್ನು ನಂದಳಿಕೆ ಬಾಲಚಂದ್ರ ರಾವ್, ಭಾಸ್ಕರ್ ಕೊಗ್ಗ ಕಾಮತ್ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ, ಕಣಿಪುರ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕ ಎಂ ನಾರಾಯಣ ಚಂಬಲ್ತಿಮಾರ್, ರಾಜಗೋಪಾಲ ಕನ್ಯಾನ ಅವರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಗೊಳಿಸಲಾಯಿತು. ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಉಪನ್ಯಾಸಕ, ಯುವ ಯಕ್ಷಕವಿ ಶಿವಕುಮಾರ ಅಳಗೋಡು ಪ್ರಕಟಿತ ಪ್ರಸಂಗಗಳ ಕುರಿತು ಉಪನ್ಯಾಸ ನೀಡಿದರು.ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಫಣಿಗಿರಿ ಪ್ರತಿಷ್ಠಾನ ಶಿರೂರು ಇದರ ಅಧ್ಯಕ್ಷ ಉಮೇಶ ಶಿರೂರು ವಂದಿಸಿದರು. ರಾಮಚಂದ್ರ ಐತಾಳರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಭೆಯ ಪೂರ್ವದಲ್ಲಿ ಶ್ರೀನಿಧಿ ಶಿರೂರು ಇವರ ಕೊಳಲುವಾದನ, ನಂತರ ಆಹ್ವಾನಿತ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ಶಿರೂರು ಫಣಿಯಪ್ಪಯ್ಯ ವಿರಚಿತ ಯವ್ವನಾಶ್ವನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು