ಶ್ರೀನಿವಾಸಪುರ: ರೈತರು ಬರಗಾಲದಲ್ಲಿ ಜಾನುವಾರು ಮೇವು ಬೆಳೆದು ರಾಸು ಪಾಲನೆ ಮಾಡಬೇಕು. ಹೆಚ್ಚುವರಿ ಹಸಿರು ಮೇವನ್ನು, ಮೇವಿನ ಅಗತ್ಯವಿರುವ ರೈತರಿಗೆ ಮಾರಾಟ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಹೊಗಳಗೆರೆ ಗ್ರಾಮದ ಪಶು ಚಿಕಿತ್ಸಾಲಯದ ಆವರಣದಲ್ಲಿ ಶುಕ್ರವಾರ ಪಶುಪಾಲನಾ ಇಲಾಖೆಯಿಂದ ನೀಡಲಾದ ಮೇವಿನ ಬೀಜದ ಕಿಟ್ ವಿತರಿಸಿ ಮಾತನಾಡಿದ ಅವರು, ಈ ಬಾರಿ ಮಳೆ ಹಿನ್ನಡೆಯಿಂದಾಗಿ ತಾಲ್ಲೂಕಿನಲ್ಲಿ ಹಸಿರು ಮೇವಿನ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.
ಕೃಷಿ ಕೊಳವೆ ಬಾವಿ ಹೊಂದಿರುವ ರೈತರು ಮೇವಿನ ಬೀಜದ ಕಿಟ್ ಪಡೆದು ಹಸಿರು ಮೇವು ಬೆಳೆಯುವುದು ಸ್ವಾಗತಾರ್ಹ. ತಮಗೆ ಬೇಕಾದಷ್ಟನ್ನು ಉಳಿಸಿಕೊಂಡು ಉಳಿದ ಮೇವನ್ನು ನೀರಿನ ಆಸರೆ ಇಲ್ಲದ ರೈತರಿಗೆ ಮಾರಾಟ ಮಾಡುವುದರಿಂದ ಕಷ್ಟಪಟ್ಟು ಬೆಳೆದ ರೈತರಿಗೆ ನಾಲ್ಕು ಕಾಸು ಸಿಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ.ವಿ.ಮಂಜುನಾಥರೆಡ್ಡಿ ಮಾತನಾಡಿ, 15 ಗ್ರಾಮಗಳ ರೈತರಿಗೆ 75 ಕಿಟ್ ಮೇವಿನ ಬೀಜ ವಿತರಿಸಲಾಗಿದೆ. ಮಳೆಯಾದಲ್ಲಿ ಉಳಿದ ರೈತರಿಗೂ ಮೇವಿನ ಬೀಜ ವಿತರಿಸಲಾಗುವುದು. ಪಶುಪಾಲಕರು ಮೇವಿನ ಬೀಜ ಸದುಪಯೋಗ ಪಡಿಸಿಕೊಂಡು ಹಸಿರು ಮೇವು ಬೆಳೆಯಬೇಕು. ಬರ ಪರಿಸ್ಥಿತಿಯಲ್ಲಿ ಹಸುಗಳ ಪಾಲನೆ ಮಾಡಬೇಕು ಎಂದು ಹೇಳಿದರು.
ಪಶು ವೈದ್ಯಾಧಿಕಾರಿ ಡಾ. ಬಿ.ಮಂಜುನಾಥ್, ಆನಂದರೆಡ್ಡಿ, ನಾರಾಯಣಸ್ವಾಮಿ, ರೆಡ್ಡಪ್ಪ ಇದ್ದರು.