ಶ್ರೀನಿವಾಸಪುರ: ಸರ್ಕಾರಿ ಉರ್ದು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು-ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಸರ್ಕಾರಿ ಉರ್ದು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು. ಪಟ್ಟಣದಲ್ಲಿ ಸೋರುತ್ತಿರುವ ಉರ್ದು ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಚಿಂತಾಮಣಿ ರಸ್ತೆ ಸಮೀಪದ ಸರ್ಕಾರಿ ಉರ್ದು ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಏರ್ಪಡಿಸಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಭಾವಿ ಪ್ರಜೆಗಳನ್ನು ರೂಪಿಸುವ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಳಕೆಗೆ ಯೋಗ್ಯವಲ್ಲದ ಹಾಗೂ ಮಳೆ ಸುರಿದಾಗ ಸೋರುವ ಶಾಲಾ ಕಟ್ಟಗಳಲ್ಲಿ ಮಕ್ಕಳನ್ನು ಕೂರಿಸಿ ನಿರ್ಭೀತಿಯಿಂದ ಪಾಠ ಮಾಡಲು ಸಾಧ್ಯವಿಲ್ಲ. ಅಪಾಯದ ಅಂಜಿನಲ್ಲಿರುವ ಶಾಲಾ ಕಟ್ಟಗಳು, ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕ್ಷೇಮಕರವಲ್ಲ ಎಂದು ಹೇಳಿದರು.
ಪುರಸಭೆ ಅನುದಾನದಲ್ಲಿ ಶಾಲಾ ಕಟ್ಟಡ ದುರಸ್ತಿ ಮಾಡಿಸುವಂತೆ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಅವರಿಗೆ ಸೂಚಿಸಿದರು. ಸಂಬಂಧಪಟ್ಟ ಎಂಜಿನಿಯರ್ ಶಾಲೆಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಶೀಘ್ರವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಕಟ್ಟಡ ಸಜ್ಜುಗೊಳಿಸಬೇಕು ಎಂದು ಹೇಳಿದರು.
ತಾಲ್ಲೂಕು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಶಿಕ್ಷಕ ಸಮುದಾಯ ಅದನ್ನು ಕಾಯ್ದುಕೊಳ್ಳಬೇಕು. ಕಲಿಕೆಗೆ ಪೂರಕವಾದ ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಶಿಕ್ಷಣ ಸಂಯೋಜಕ ಅಮರನಾಥ್, ಸಿಆರ್‍ಪಿ ಆರೀಫ್ ಪಾಷ, ಸಾದಿಕ್ ಪಾಷ ಇದ್ದರು.