ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಬುಧವಾರ, ಬಡವರ, ದಲಿತರ, ಅಧಿವಾಸಿಗಳ, ಹಿಂದುಳಿದ ವರ್ಗಗಳ ಬಗರ್ ಹುಕುಂ ಸಾಗುವಳಿದಾರ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಭೂಮಿ ಹಕ್ಕಿಗೆ ಮಾರಕವಾಗಿರುವ ಅರಣ್ಯ ಕಲಾಖೆ ಸಚಿವರ ಟಿಪ್ಪಣಿ ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ರಾಜ್ಯದಲ್ಲಿ ಎಲ್ಲ ರೀತಿಯ ಒತ್ತುವರಿ ತೆರವುಗೊಳಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಟಿಪ್ಪಣಿ ಕಳಿಸಿರುವುದು ಅತ್ಯಂತ ಆಘಾತಕಾರಿ ವಿಷಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅರಣ್ಯ ಇಲಾಖೆ ಭೂ ಕಬಳಿಕೆ ಕಾಯ್ದೆಯಡಿ ರೈತರ ಮೇಲೆ ಪ್ರಕರಣ ದಾಖಲಿಸಿದೆ. ಸರ್ಕಾರ ಇಂಥ ಪ್ರಕರಣಗಳನ್ನು ರದ್ದುಪಡಿಸಬೇಕು. ಕಾನೂನು ಬಾಹಿರವಾಗಿ ರೈತರ ಮೇಲೆ ಕೇಸು ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ಗೆ ನೀಡಲಾಯಿತು.
ಕೆಪಿಆರ್ಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ತಾಲ್ಲೂಕು ಕಾರ್ಯದರ್ಶಿ ಬಿ.ಎ.ಸೈಯದ್ ಫಾರೂಕ್, ಉಪಾಧ್ಯಕ್ಷರಾದ ಆರ್.ವೆಂಕಟೇಶ್, ಎಂ.ಎಸ್.ನಾಗರಾಜ್, ಸಹ ಕಾರ್ಯದರ್ಶಿಗಳಾದ ಶಿವಾರೆಡ್ಡಿ, ವೆಂಕಟಲಕ್ಷ್ಮಮ್ಮ, ಶಿವರಾಜ್ ಕುಮಾರ್, ಮಂಜುಳ, ಶ್ರೀನಾಥ್, ವಿ.ಚಲಪತಿ, ಅಲ್ಲಾಬಕಷ್ ಇದ್ದರು.