ಸಾಲ ಪಡೆದಿರುವ ಫಲಾನುಭವಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು – ವಿ.ಅಯ್ಯಪ್ಪ

ಶ್ರೀನಿವಾಸಪುರ: ಸಾಲ ಪಡೆದಿರುವ ಫಲಾನುಭವಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಕಸಬಾ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ವಿ.ಅಯ್ಯಪ್ಪ ಹೇಳಿದರು.
ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರಿಗೆ ಪಕ್ಷಾತೀತವಾಗಿ ಸಾಲ ವಿತರಣೆ ಮಾಡಲಾಗಿದೆ. ಮರುಪಾವತಿ ಪ್ರಮಾಣ ತೃಪ್ತಿಕರವಾಗಿದ್ದರೂ, ಇನ್ನಷ್ಟು ಪ್ರಾಮಾಣಿಕವಾಗಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕು. ಸಂಘದ ಕಟ್ಟಡ ಬಾಡಿಗೆಯಿಂದ ಮಾಸಿಕ ರೂ.75 ಸಾವಿರ ಆದಾಯ ಬರುತ್ತದೆ ಎಂದು ಹೇಳಿದರು.
ಸಭೆ ರೂ.17.80 ಲಕ್ಷ ವಾರ್ಷಿಕ ಬಜೆಟ್‍ಗೆ ಅನುಮೋದನೆ ನೀಡಿತು.
ನಿರ್ದೇಶಕರಾದ ಶಾಂತಮ್ಮ, ವೆಂಕಟರೆಡ್ಡಿ, ಎಂ.ಬೈರೆಡ್ಡಿ, ಮುನಿಯಪ್ಪ, ಶಬ್ಬೀರ್ ಅಹ್ಮದ್ ಪಾಷ, ಸೀತಾರಾಮರೆಡ್ಡಿ, ನಾಗರಾಜು, ಗುರಪ್ಪ, ನಂಜುಂಡಪ್ಪ, ಸಿ.ಎನ್.ಶಿವಾರೆಡ್ಡಿ, ಎಂ.ದೇವಿಕಾ, ಸಿ.ಎನ್.ವಿನೋದ್ ಇದ್ದರು.