ಶ್ರೀನಿವಾಸಪುರ:ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಬೇಕು – ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್

ಶ್ರೀನಿವಾಸಪುರ: ಫಲಾನುಭವಿಗಳು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಬೇಕು ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬ್ಯಾಂಕ್ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕ್ ರೈತರು ಮತ್ತಿತರ ಫಲಾನುಭವಿಗಳಿಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಬ್ಯಾಂಕ್ ಸಾಲ ನೀಡುವುದಿಲ್ಲ ಎಂದು ಹೇಳಿದರು.
ಮುಖ್ಯವಾಗಿ ರೈತ ಸಮುದಾಯದ ಹಿತ ಕಾಯಲು ಬ್ಯಾಂಕ್ ಸ್ಥಾಪಿಸಲಾಗಿದೆ. ಆದರೆ ಸಾಲಗಾರರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ. ಹಾಗಾಗಿ ಹೊಸ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿ ಬದಲಾಗಬೇಕಾದರೆ, ಸಾಲ ವಸೂಲಾತಿ ಪ್ರಮಾಣ ಹೆಚ್ಚಬೇಕು. ಬ್ಯಾಂಕ್ ನಿರ್ದೇಶಕರು ಸಾಲಗಾರರ ಮನೆಗಳಿಗೆ ಹೋಗಿ, ಸಾಲಗಾರರ ಮನವೊಲಿಸಿ ಸಾಲ ಮರುಪಾವತಿ ಮಾಡುವಂತೆ ಮನವೊಲಿಸಬೇಕು ಎಂದು ಹೇಳಿದರು.
ಸಧ್ಯಕ್ಕೆ ರೂ.8.88 ಕೋಟಿ ಸಾಲ ವಸೂಲಾಗಬೇಕಾಗಿದೆ. ಸಾಲ ಮರುಪಾವತಿಯಾದರೆ 256 ಸಾಲಗಾರರಿಗೆ ರೂ.1.95 ಕೋಟಿ ಬಡ್ಡಿ ಮನ್ನಾ ಮಾಡಲಾಗುವುದು. ಸಾಲಗಾರರು ತಮ್ಮ ಹಾಗೂ ಬ್ಯಾಂಕ್ ಅಭಿವೃದ್ಧಿ ದೃಷ್ಟಿಯಿಂದ ಸಾಲ ಮರುಪಾವತಿ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ರೂ.57.45 ಲಕ್ಷ ಬ್ಯಾಕ್ ನಿರ್ವಹಣಾ ಬಜೆಟ್‍ಗೆ ಅನುಮೋದನೆ ನೀಡಲಾಯಿತು. ಬ್ಯಾಂಕ್‍ಗೆ ಹೊಸ ಕಂಪ್ಯೂಟರ್ ಖರೀದಿಸಲು ಹಾಗೂ ಹಳೆ ಜೀಪ್ ಹರಾಜುಹಾಕಲು ನಿರ್ಧರಿಸಲಾಯಿತು.
ಬ್ಯಾಂಕ್ ಉಪಾಧ್ಯಕ್ಷ ಕೆ.ಬಿ.ಸುಬ್ಬಾರೆಡ್ಡಿ, ನಿದೇಶಕರಾದ ಎಲ್.ಗೋಪಾಲಕೃಷ್ಣ, ಎಂ.ಎನ್.ರಾಮಚಂದ್ರಾರೆಡ್ಡಿ, ಎಸ್.ಜಿ.ಜಗದೀಶ್ ಕುಮಾರ್, ಟಿ.ಎನ್.ಕೃಷ್ಣಾರೆಡ್ಡಿ, ವ್ಯವಸ್ಥಾಪಕ ಸಿ.ಎನ್.ಕೃಷ್ಣನ್, ಲೆಕ್ಕಾಧಿಕಾರಿ ಬಿ.ಶ್ರೀನಿವಾಸ್, ಮಂಜುನಾಥಾಚಾರ್, ಕೆ.ಬಿ.ನರೇಶ್, ಆರ್.ಎನ್.ರವೀಂದ್ರ, ಕೆ.ಎನ್.ಸತೀಶ್, ಜಿ.ಎನ್.ಗೋವಿಂದರೆಡ್ಡಿ, ಶಶಿಕುಮಾರ್, ಸೀತಾರಾಮರೆಡ್ಡಿ, ಮಂಜುನಾಥರೆಡ್ಡಿ, ಎನ್.ತಿಮ್ಮಯ್ಯ ಇದ್ದರು.