ಶ್ರೀನಿವಾಸಪುರ: ಸಾಮಾಜಿಕ ನ್ಯಾಯ ಪಡೆಯಲು ಅಕ್ಷರ ಜ್ಞಾನ ಅಗತ್ಯ – ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಸಾಮಾಜಿಕ ನ್ಯಾಯ ಪಡೆಯಲು ಅಕ್ಷರ ಜ್ಞಾನ ಅಗತ್ಯ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಾಕ್ಷರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯವಾಗಿ ಹೆಣ್ಣು ಮಕ್ಕಳು ಅಕ್ಷರ ಕಲಿಯಲೇ ಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಅರ್ಥಪೂರ್ಣವಾದುದು ಎಂದು ಹೇಳಿದರು.
ಅನಕ್ಷರತೆ ನಿವಾರಣೆಯಲ್ಲಿ ಶಾಲಾ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಇಷ್ಟರ ನಡುವೆಯೂ ಅಕ್ಷರ ಕಲಿಯದೆ ಉಳಿದ ಮಂದಿಯನ್ನು ಗುರ್ತಿಸಿ, ಕಲಿಸುವ ಕಾರ್ಯದಲ್ಲಿ ಸಾಕ್ಷರತಾ ಇಲಾಖೆ ತೊಡಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಭಾಗ್ಯಲಕ್ಷö್ಮಮ್ಮ ಮಾತನಾಡಿ, ಸಮಾಜದಲ್ಲಿ ಅನಕ್ಷರತೆ ನಿವಾರಿಸುವಲ್ಲಿ ಸಾಕ್ಷರತಾ ಇಲಾಖೆ ಮುಖ್ಯ ಪಾತ್ರ ವಹಿಸಿದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ಹಾದಿ ಬೀದಿ ಸಂಚರಿಸಿ ಅನಕ್ಷರಸ್ಥರನ್ನು ಗುರ್ತಿಸಿ, ಅಕ್ಷರ ಕಲಿಸುವ ಕಾರ್ಯ ಮಾಡಿದೆ. ಆ ಕಾರ್ಯದಲ್ಲಿ ಸಮಾಜದ ಅಕ್ಷರಸ್ಥ ಸಮುದಾಯವನ್ನು ತೊಡಗಿಸಿಕೊಂಡು ಸಾಕ್ಷರತೆ ಉಂಟುಮಾಡಿದ್ದು ಒಂದು ದಾಖಲೆಯಾಗಿ ಉಳಿದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಕ್ಷರತಾ ಧ್ವಜಾರೋಹಣ ಮಾಡಲಾಯಿತು. ಸಾಕ್ಷರತಾ ಪ್ರತಿಜ್ಞೆ ಕೈಗೊಳ್ಳಲಾಯಿತು. ಉತ್ತಮ ಬೋಧಕರನ್ನು ಸನ್ಮಾನಿಸಲಾಯಿತು.
ಅಧಿಕಾರಿಗಳಾದ ಶಿವಮ್ಮ, ಜಿ.ವಿ.ಚಂದ್ರಪ್ಪ, ಚಲಪತಿ, ಶೇಷಾದ್ರಿ ಇದ್ದರು.