ಸಾಧನೆಗೆ ಅಡ್ಡಿಯಾದುದು ಯಾವುದೂ ಇಲ್ಲ ಆದರೆ ಸಾಧಿಸುವ ಛಲವಿರಬೇಕು ಸುರೇಶ್ ಭಂಡಾರಿಯವರ ಜೀವನ ತೆರದ ಪುಸ್ತಕ

ಸಾಧನೆಗೆ ಅಡ್ಡಿಯಾದುದು ಯಾವುದೂ ಇಲ್ಲ ಆದರೆ ಸಾಧಿಸುವ ಛಲವಿರಬೇಕು ಎಂಬ ಮಾತಿಗೆ ಸುರೇಶ್ ಭಂಡಾರಿಯವರ ಜೀವನ ತೆರದ ಪುಸ್ತಕ. ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದುಗಲ್‌ನವರಾದ ಅವರು ಹುಟ್ಟಿನಿಂದ ವಿಶೇಷಚೇತನರಲ್ಲ. ಆದರೆ ಒಂದೂವರೆ ವರ್ಷದ ಕೂಸಾಗಿದ್ದಾಗಲೇ ವಿಪರೀತ ಜ್ವರ ಬಾಧೆ ಹಾಗೂ ಸರಿಯಾದ ಚಿಕಿತ್ಸೆ ಸಿಗದ ಕಾರಣದಿಂದಾಗಿ ಪೋಲಿಯೊ ಪೀಡಿತರಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡರು. ಆದರೆ ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುವ ಅವರ ಹುರುಪು ಹಾಗೂ ಹಂಬಲ ಮಾತ್ರ ದಣಿವಿಲ್ಲದ್ದು.

ತಾಯಿ ಪಾರ್ವತೆಮ್ಮ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಕ್ಕೆ ಸೇರಿದವರು. ಇವರ ನಾಲ್ವರು ಮಕ್ಕಳಲ್ಲಿ ಸುರೇಶ್‌ ಹಿರಿಯ ಮಗ. ಒಂದೂವರೆ ವರ್ಷ ಪ್ರಾಯದಲ್ಲಿ ಜ್ವರ ಬಾಧೆಯಿಂದಾಗಿ ಹೆಚ್ಚಿನ ಚಿಕಿತ್ಸೆ ಒದಗಿಸಲು ಅಜ್ಜಿ ಅವರನ್ನು ಮುಂಬೈಗೆ ಕರೆದುಕೊಂಡು ಹೋದರು. ಮುಂಬೈನಲ್ಲಿ ವೈದ್ಯರೊಬ್ಬರು ಲಸಿಕೆ ನೀಡಿ ತಣ್ಣೀರಿನ ಬಕೆಟ್‌ನಲ್ಲಿ ಅದ್ದಿ ತೆಗೆದ ಕೆಲವು ಗಂಟೆಗಳಲ್ಲಿಯೇ ದೇಹದ ಎಲ್ಲ ಅಂಗಾಂಗಳನ್ನು ಸ್ವಾಧೀನ ಮಾಡಿಕೊಂಡು ಪೊಲೀಯೋ ವಕ್ಕರಿಸಿತು‌‌. ಆ ಬಳಿಕ ಮುಂಬೈನ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಕಾಲುಗಳು ಮಾತ್ರ ಗುಣವಾಗದೆ ಶಾಶ್ವತ ಅಂಗವೈಕಲ್ಯತೆಗೆ ತುತ್ತಾಗಬೇಕಾಯ್ತು. ತದನಂತರ ಸುಮಾರು 8 ವರ್ಷಗಳ ಕಾಲ ಅಜ್ಜಿಯ ಆರೈಕೆಯಲ್ಲಿ ಮುಂಬೈನಲ್ಲಿಯೇ ಬೆಳೆದರು‌. ಅಲ್ಲಿ ಶಾಲೆಗಳು ಬಹಳ ದೂರವಿದ್ದ ಕಾರಣದಿಂದಾಗಿ ವಿದ್ಯಾಭ್ಯಾಸದ ತೊಡಕುಗಳನ್ನು ನಿವಾರಿಸಲು ಅಜ್ಜಿ ಮತ್ತೊಮ್ಮೆ ಅವರನ್ನು ಹುಟ್ಟೂರಿಗೆ‌ ತಂದು ಬಿಟ್ಟರು. ಆಗ ಪಾರ್ವತೆಮ್ಮ‌ನವರು ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮನೆಯಿಂದ ಅನತಿ ದೂರದಲ್ಲಿಯೇ ಇದ್ದ ಹನುಮಂತ ದೇವಾಲಯದಲ್ಲಿ ನಡೆಸಲಾಗುತ್ತಿದ್ದ ಸರ್ಕಾರಿ ಗುಡಿ ಶಾಲೆಯಲ್ಲಿ 1 ರಿಂದ 3ನೇ ತರಗತಿವರೆಗಿನ ಶಿಕ್ಷಣವನ್ನು ಗೆಳೆಯರ ಸಹಾಯದಿಂದಲೇ ಪಡೆದರು. ಪ್ರತಿದಿನ ಶಾಲೆಗೆ ಸುರೇಶ್‌ರನ್ನು ಹೊತ್ತೊಯ್ಯುವ ಹಾಗೂ ಮನೆಗೆ ವಾಪಸು ಹೊತ್ತುಕೊಂಡು ಬರುವ ಕಾಯಕವನ್ನು ಗೆಳೆಯರ ಬಳಗ ನಿಭಾಯಿಸಿತು. 4ನೇ ತರಗತಿಯಿಂದ 10ನೇ ತರಗತಿಯವರೆಗಿನ ಶಿಕ್ಷಣಕ್ಕಾಗಿ ಸೈಕಲ್ ತರಿಸಿಕೊಂಡು ಗೆಳೆಯರ ಸಹಾಯದಿಂದಲೇ ಶಾಲೆಗೆ ತಲುಪಿದರು. ಸಾಮಾನ್ಯವಾಗಿ ವಿಕಲಚೇತನರು ಬಳಸುವ ಮೂರು ಚಕ್ರಗಳ ಸೈಕಲ್ ಅವರ ಬಳಿ ಇರಲಿಲ್ಲ. ಹತ್ತನೇ ತರಗತಿ ತಲುಪಿದಾಗ ವಿಕಲಚೇತನರ ಇಲಾಖೆಯ ಬಗ್ಗೆ ಒಂದಿಷ್ಟು ಮಾಹಿತಿ ಸುರೇಶ್‌ರಿಗೆ ಲಭಿಸಿತು‌. ಸರ್ಕಾರದಿಂದ ನೀಡಲಾಗುವ ಮೂರು ಚಕ್ರಗಳ ಸೈಕಲ್ ಪಡೆಯಲು ಬಹಳ ಕಷ್ಟಪಟ್ಟು ವೈದ್ಯಕೀಯ ಪ್ರಮಾಣ ಪತ್ರ ಮಾಡಿಸಿಕೊಂಡು ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಮೂರು ಚಕ್ರಗಳ ಸೈಕಲ್ ಲಭಿಸಿತು‌. ಇಲಾಖೆಯ ಪರಿಚಯದ ಬೆನ್ನಲ್ಲೇ ವಿಕಲಚೇತನರಿಗೆ ಲಭಿಸುವ ಮಾಸಾಶಸನದ ಬಗ್ಗೆಯೂ ಮಾಹಿತಿ ಲಭಿಸಿತು. ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿ ಸಾಕಷ್ಟು ಬಾರಿ ಅಲೆದಾಡಬೇಕಾಯ್ತು. ಸುಮಾರು ಒಂದು ವರ್ಷದ ಬಳಿಕ ಅವರಿಗೆ ಮಾಸಾಶನ ಪ್ರಾರಂಭವಾಯಿತು. 1995ರಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುರೇಶ್‌ರವರು ತಮ್ಮ ಶಿಕ್ಷಣಕ್ಕೆ ಸಹಾಯ ನೀಡಿದ ಸ್ನೇಹಿತರಿಗೆ ಆಭಾರಿಯಾಗಿದ್ದಾರೆ. ಯಾಕೆಂದರೆ, ಮೂರು ದಶಕಗಳ ಹಿಂದೆ ವಿಕಲಚೇತನರಿಗೆ ಪೂರಕವಾದ ಯಾವುದೇ ಸೌಲಭ್ಯಗಳಿಲ್ಲದ, ವಿಕಲಚೇತನರಿಗಾಗಿಯೇ ಒಂದು ಇಲಾಖೆಯೇ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಅರಿವಿಲ್ಲ ಸಮಯದಲ್ಲಿ ಗೆಳಯರ ಸಹಾಯ, ಸಹಕಾರವಿಲ್ಲದಿರುತ್ತಿದ್ದರೆ ಶೈಕ್ಷಣಿಕ ಜೀವನ ಎತ್ತ ಸಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿರಲಿಲ್ಲ ಎನ್ನುತ್ತಾರೆ ಸುರೇಶ್.

ಆ ಕಾಲದಲ್ಲಿ ಊರಿನಲ್ಲಿ ಶಿಕ್ಷಣ ಮುಂದುವರಿಸಲು ಕಾಲೇಜುಗಳಿಲ್ಲದ ಕಾರಣದಿಂದಾಗಿ ಉನ್ನತ ಶಿಕ್ಷಣದ ಕನಸನ್ನು ಅವರು ಕೈಬಿಡಬೇಕಾಯಿತು‌. ದೂರ ಪ್ರಯಾಣ, ವಿಶೇಷಚೇತನರಿಗೆ ಬೇಕಾಗುವ ಸೌಲಭ್ಯಗಳ ಕೊರತೆಯ ಸಂಕಷ್ಟಕ್ಕೆ ಬೇಸತ್ತು ಸುರೇಶ್ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು‌. 1996ರಲ್ಲಿ ಚಿಕ್ಕ ಡಬ್ಬಾ ಅಂಗಡಿಯೊಂದನ್ನು ಬಾಡಿಗೆಗೆ ಪಡೆದು ಪಾನ್ ಶಾಪ್ ಅಂಗಡಿಯನ್ನು ಪ್ರಾರಂಭಿಸಿದರು. ಬಾಲ್ಯದಿಂದಲೇ ಟಿ.ವಿ, ರೆಡಿಯೋ, ಟೇಪ್‌ ರೆಕಾರ್ಡ್ ರಿಪೇರಿ ಮಾಡುವ ಆಸಕ್ತಿ ಇದ್ದುದ್ದರಿಂದ ಚಿಕ್ಕಪ್ಪನವರ ಸಲಹೆಯ ಮೇರೆಗೆ ಪಕ್ಕದಲ್ಲಿಯೇ ಇದ್ದ ಪರಿಚಯಸ್ಥರ ಬಳಿ ಗಡಿಯಾರ ರಿಪೇರಿ ಮಾಡುವುದನ್ನು ಕಲಿತರು. 1998ರಲ್ಲಿ ತಮ್ಮದೇ ಸ್ವಂತ ಒಂದು ಗಡಿಯಾರ ರಿಪೇರಿ ಅಂಗಡಿಯನ್ನು ಆರಂಭಿಸುವ ಮೂಲಕ ಸ್ವಉದ್ಯೋಗದ ವೃತ್ತಿ ಜೀವನಕ್ಕೆ ಕಾಲಿಟ್ಟರು.

ಶಿಕ್ಷಣ ಪಡೆಯುವಾಗ ಅನುಭವಿಸಿದ ತೊಂದರೆಗಳು, ವೈದ್ಯಕೀಯ ಪ್ರಮಾಣ ಪತ್ರ, ತ್ರಿಚಕ್ರ ಸೈಕಲ್ ಹಾಗೂ ಮಾಸಾಶನ ಪಡೆಯಲು ಪಟ್ಟಂತಹ ಕಷ್ಟಗಳು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲು ಸುರೇಶ್‌ರವರಿಗೆ ಬಲು ದೊಡ್ಡ ಪ್ರೇರಣೆಯಾಯಿತು. ತ್ರಿಚಕ್ರ ಸೈಕಲ್ ಪಡೆಯಲು ಇಲಾಖೆಗೆ ಹೋದ ಸಂದರ್ಭದಲ್ಲಿ ಅಲ್ಲಿ ರಾಶಿಗಟ್ಟಲೇ ಸುರಿಯಲಾಗಿದ್ದ ತ್ರಿಚಕ್ರ ಸೈಕಲ್‌ಗಳು ಗೋದಾಮಿನಲ್ಲಿ ದುರಸ್ತಿ ಸ್ಥಿತಿಯಲ್ಲಿ ಬಿದ್ದಿದ್ದರು ಕೂಡಾ ಅದರ ಮಾಹಿತಿ ಯಾರಿಗೂ ಇರಲಿಲ್ಲ ಎಂಬುದು ಅವರನ್ನು ಬಲವಾಗಿ ಕಾಡಿತು.

“ರಾಯಚೂರಿನಲ್ಲಿ ಸುರೇಶ್ ಕುಷ್ಟಗಿಯವರು ಆರಂಭಿಸಿದ್ದ ವಿಕಲಚೇತನರ ಒಕ್ಕೂಟವು ನನಗೆ ಪ್ರೇರಣೆಯಾಯಿತು. ಅವರಿಂದ ನಾನು ಹಲವಾರು ಮಾಹಿತಿಗಳನ್ನು ತಿಳಿದುಕೊಂಡೆ. ಅವರ ಮಾರ್ಗದರ್ಶನದಲ್ಲಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡು 2001ರಿಂದ ನಾನು ಸಕ್ರಿಯವಾಗಿ ವಿಕಲಚೇತನರ ಸಂಘಟನೆಗಳಲ್ಲಿ ಸೇವೆ ಪ್ರಾರಂಭ ಮಾಡಿದೆ” ಎಂದು ಸುರೇಶ್ ಹೇಳುತ್ತಾರೆ.

ಹಲವು ಸಂಘ ಸಂಸ್ಥೆಗಳಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡಿ 2008ರಲ್ಲಿ ಸಮಾನ ಮನಸ್ಕರ ಹಾಗೂ ವಿಕಲಚೇತನ ಸ್ನೇಹಿತರ ಜೊತೆ ಸೇರಿ “ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಸೇವೆ ಸಲ್ಲಿಸುತ್ತಿದ್ದಾರೆ. 2018ರಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಸದಸ್ಯನಾಗಿ ಸೇರಿದ ಅವರು ಪ್ರಸ್ತುತ ಸಮಿತಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ 5 ತಿಂಗಳುಗಳ ಹಿಂದೆ ದಿ ಅಸೋಸಿಯೇಷನ್ ಆಫ್ ಪಿಫಲ್ ವಿತ್ ಡಿಸೆಬಿಲಿಟಿ (ಎಪಿಡಿ) ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕ್ಸೆಸಿಬಿಲಿಟಿ ಬಗ್ಗೆ ತರಬೇತಿ ಪಡೆದಿದ್ದು, ಪ್ರಸ್ತುತ ನೂತನವಾಗಿ ರಚನೆಯಾದ ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ ಸಮಿತಿಯ ರಾಜ್ಯ ಕಾರ್ಯದರ್ಶಿಯಾಗಿ ಆಕ್ಸೆಸಿಬಿಲಿಟಿ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ತಮ್ಮ ಉದ್ಯೋಗದ ಜೊತೆಗೆ ಸುಮಾರು 20 ವರ್ಷಗಳಿಂದ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಾ, ಇದುವರೆಗೆ 1060 ವಿಕಲಚೇತನರಿಗೆ ವಿಶೇಷ ಗುರುತಿನ ಚೀಟಿಗಳನ್ನು( UDID card) ಒದಗಿಸಿ ಕೊಟ್ಟಿದ್ದಾರೆ. ಶಾಸಕರ ಅನುದಾನ ಸೇರಿದಂತೆ ಪುರಸಭೆ, ಗ್ರಾಮ ಪಂಚಾಯಿತಿ ಹಾಗೂ ತಾಲೂಕ ಪಂಚಾಯತ್ ಅನುದಾನಗಳಲ್ಲಿ ವಿಕಲಚೇತನರಿಗೆ ಮೀಸಲಿರುವ ಶೇ.5ರ ಅನುದಾನವನ್ನು ಬಳಕೆ ಮಾಡಿಸಿ ಸುಮಾರು 100 ಜನರಿಗೆ ತ್ರಿಚಕ್ರ ವಾಹನ ಸೇರಿದಂತೆ 460 ವಿಶೇಷಚೇತನರಿಗೆ ವಿವಿಧ ಬಗೆಯ ಸಾಧನ ಸಲಕರಣೆಗಳು, 20 ಜನರಿಗೆ ಗ್ಯಾಸ್ ಸಿಲಿಂಡರ್, 150 ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಟೈಲರಿಂಗ್ ಮಷಿನ್ ಗಳನ್ನು ಒದಗಿಸಿದ್ದಾರೆ. ವಿಕಲಚೇತನರ ಸಬಲೀಕರಣ ಇಲಾಖೆಯಿಂದ 60 ಜನರಿಗೆ ವಿದ್ಯಾರ್ಥಿ ವೇತನ, 6 ಜನರಿಗೆ ವಿವಾಹ ಪ್ರೋತ್ಸಾಹ ಧನ, 10 ಜನರಿಗೆ ಆಧಾರ ಯೋಜನೆಗಳನ್ನು ಒದಗಿಸಿಕೊಟ್ಟಿದ್ದಾರೆ. ಸಾರಿಗೆ ಇಲಾಖೆಯಿಂದ 400 ಜನರಿಗೆ ರಿಯಾಯಿತಿ ದರದ ಬಸ್ ಪಾಸ್ ಹಾಗೂ 50 ಜನರಿಗೆ ರೈಲ್ವೆ ರಿಯಾಯಿತಿ ಪಾಸ್ ಗಳನ್ನು ಒದಗಿಸುವುದು, ಕಂದಾಯ ಇಲಾಖೆಯಿಂದ 380 ಜನರಿಗೆ ಪೋಷಣಾ ಭತ್ಯೆ, ಅಲ್ಲದೆ ಕೋವಿಡ್ ಲಾಕಡೌನ್ ಸಮಯದಲ್ಲಿ 348 ಜನ ವಿಕಲಚೇತನರ ಕುಟುಂಬಗಳಿಗೆ ಆಹಾರ ಕಿಟ್ ಹಾಗೂ 25 ಜನ ಬೆನ್ನುಹುರಿ ಅಪಘಾತವುಳ್ಳ ವ್ಯಕ್ತಿಗಳಿಗೆ ಮೆಡಿಕಲ್ ಕಿಟ್, 25 ಬುದ್ಧಿ ಮಾಂದ್ಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು, 60 ಜನ ತೀವ್ರತರವಾದ ವಿಕಲಚೇತನರಿಗೆ ಆರೋಗ್ಯ ತಪಾಸಣೆ ಹಾಗೂ 490 ಜನ ವಿಕಲಚೇತನರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ. 150 ಜನ ವಿಕಲಚೇತನರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಳೆದ 2023 ರ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ 42 ಮತಗಟ್ಟೆ ಕೇಂದ್ರಗಳ ವಿಲ್ ಚೇರ್, ರ್ಯಾಂಪ್ ಸೇರಿದಂತೆ ವಿಕಲಚೇತನರಿಗೆ ಅವಶ್ಯಕವಿರುವ ಆಕ್ಸೆಸಿಬಿಲಿಟಿಯನ್ನು ಒದಗಿಸಿ ಕೊಡಲಾಗಿದೆ. 1000 ಕ್ಕೂ ಹೆಚ್ಚು ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸುರೇಶ್‌ ಮಾಡಿದ್ದಾರೆ‌.

ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ದುಡಿದ ಸುರೇಶ್ ಭಂಡಾರಿಯವರ ಸೇವೆಯನ್ನು ಗುರುತಿಸಿ 2020ರಲ್ಲಿ ರಾಯಚೂರು ಜಿಲ್ಲೆಯ ಜನಕಲ್ಯಾಣ ಟ್ರಸ್ಟ್ ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ದಿನಪತ್ರಿಕೆ ವತಿಯಿಂದ “ಜನಸೇವಾ ರತ್ನ ರಾಜ್ಯ ಪ್ರಶಸ್ತಿ” ಹಾಗೂ 2021ರಲ್ಲಿ ವೈದ್ಯಕೀಯ ರಾಷ್ಟ್ರೀಯ ದಿನಪತ್ರಿಕೆ ಲಿಂಗಸೂರು ವತಿಯಿಂದ “ವೀರ ಕನ್ನಡಿಗ ರಾಜ್ಯ ಪ್ರಶಸ್ತಿ” ಹಾಗೂ 2022 ರಲ್ಲಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ರಾಯಚೂರು ಜಿಲ್ಲೆಯಿಂದ “ಸಮಾಜ ಸೇವಾ ರತ್ನ” ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ‌.

2005ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಸುರೇಶ್‌ರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ 9ನೇ ತರಗತಿಯಲ್ಲಿ ಕಲಿಯುತ್ತಿದ್ದರೆ ಮಗಳು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2013ರಲ್ಲಿ ತಾಯಿ ಪಾರ್ವತೆಮ್ಮ ಕೆಲಸದಿಂದ ನಿವೃತ್ತರಾದ ಬಳಿಕ ಇಡೀ ಕುಟುಂಬದ ಜವಾಬ್ದಾರಿಯನ್ನು ಸುರೇಶ್‌ರವರು ಹೊತ್ತುಕೊಂಡು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ. “ನಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ಪತ್ನಿ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪ್ರೋತ್ಸಾಹವನ್ನು ನೀಡಿದ್ದಾರೆ. ನನಗೆ ಯಾವತ್ತೂ ನಾನು ವಿಕಲಚೇತನ ಎಂಬುವ ಭಾವನೆ ಬರದಂತೆ ನನ್ನ ಕುಟುಂಬ ನನ್ನನ್ನು ನೋಡಿಕೊಂಡಿದೆ. ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸೇವೆ ಮಾಡುವುದೇ ನನ್ನ ಗುರಿ ಮತ್ತು ಸಮಾಜದ ಕಟ್ಟ ಕಡೆಯ ವಿಕಲಚೇತನ ವ್ಯಕ್ತಿಗೂ ಅವನ ಹಕ್ಕು ಸಿಗಬೇಕು” ಎಂದು ಸುರೇಶ್ ಆಶಿಸುತ್ತಾರೆ.