ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ :120 ಎಕರೆ ಅರಣ್ಯ ಒತ್ತುವರಿ ತೆರವು

ಶ್ರೀನಿವಾಸಪುರ: ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪಟ್ಟಣದ ಹೊರವಲಯದಲ್ಲಿ 120 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿತು.
ಪಟ್ಟಣದ ಹೊರವಲಯದ ಅರಣ್ಯ ಒತ್ತುವರಿ ಪ್ರದೇಶಕ್ಕೆ ಬುಧವಾರ ಬೆಳಿಗ್ಗೆ ಸುಮಾರು ಮೂರು ಗಂಟೆ ಸಮಯದಲ್ಲಿ ಜೆಸಿಬಿ ಹಾಗೂ ಇಟಾಚಿಗಳನ್ನು ನುಗ್ಗಿಸಿ, ಕೆಲವರು ಅಕ್ರಮವಾಗಿ ಬೆಳೆಯಲಾಗಿದ್ದ ಮಾವು, ನೇರಳೆ, ಹೊಂಗೆ ಮತ್ತಿತರ ಮರಗಳನ್ನು ಉರುಳಿಸಲಾಯಿತು. ಮಾವಿನ ತೋಟಗಳಲ್ಲಿ ನಿರ್ಮಿಸಲಾಗಿದ್ದ 3 ಕೃಷಿ ಹೊಂಡ, ನಿರ್ಮಾಣ ಹಂತದಲ್ಲಿದ್ದ 2 ಕೋಳಿ ಫಾರಂ ಹಾಗೂ 3 ಶೆಡ್‍ಗಳನ್ನು ನೆಲಸಮಗೊಳಿಸಲಾಯಿತು.
ಕಾರ್ಯಾಚರಣೆಯಲ್ಲಿ 15 ಜೆಸಿಬಿ, 10 ಇಟಾಚಿ ಬಳಸಲಾಯಿತು. 150 ಅರಣ್ಯ ಸಿಬ್ಬಂದಿ, 60 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸ್ ಮೀಸಲು ಪಡೆಯ 2 ತುಕಡಿ ಭಾಗವಹಿಸಿದ್ದವು. ಒಂದು ಅಹಿತಕರ ಘಟನೆ ಹೊರತುಪಡಿಸಿದರೆ ಕಾರ್ಯಾಚರಣೆ ಅಬಾಧಿತವಾಗಿ ನಡೆಯಿತು. ಕಾರ್ಯಾಚರಣೆ ವಿರೋಧಿಸಿ ಎರಡು ಜೆಸಿಬಿ ಗಾಜು ಒಡೆದುಹಾಕಿದ ಶ್ರೀಧರ್ ರೆಡ್ಡಿ ಎಂಬ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ವಿ.ಏಡುಕೊಂಡಲು ತಿಳಿಸಿದರು.
ವಲಯ ಅರಣ್ಯಾಧಿಕಾರಿಗಳಾದ ಕೆ.ಮಹೇಶ್, ಎಸ್.ವಿ.ಜ್ಯೋತಿ, ಡಿವೈಎಸ್‍ಪಿ ನಂದಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳಾದ ಪ್ರದೀಪ್ ಸಿಂಗ್, ಈಶ್ವರ್, ಭಾರತಿ, ರವಣಮ್ಮ, ರವೀಂದ್ರಗೌಡ, ಉಪ ಅರಣ್ಯಾಧಿಕಾರಿಗಳಾದ ಅನಿಲ್, ಶ್ರೀನಾಥ್, ನವೀನ್, ಮಂಜುನಾಥ್, ಹರೀಶ್ ಕುಮಾರ್, ವೆಂಕಟರಮಣ, ಭರತ್ ಇದ್ದರು.