ದೇವ್ ಮನ್ಶಾಂತ್ ಆಯ್ಲೊ – ಯೇಸು ಕ್ರಿಸ್ತನ ಜೀವನ ಪುಸ್ತಕ ಬಿಡುಗಡೆ

ಯೇಸು ಕ್ರಿಸ್ತನ ಜೀವನದ ಮೇಲೆ ಖ್ಯಾತ ಕೊಂಕಣಿ ಕವಿ, ಸಾಹಿತಿ ಶ್ರೀ ಮರಿಯಾಣ್ ಪಾವ್ಲ್ ರೊಡ್ರಿಗಸ್ ಬರೆದಿರುವ ಕೊಂಕಣಿ ಪುಸ್ತಕ ’ದೇವ್ ಮನ್ಶಾಂತ್ ಆಯ್ಲೊ – ಜೆಜು ಕ್ರಿಸ್ತಾಚೆಂ ಜಿವಿತ್’ ಮಿಲಾಗ್ರಿಸ್ ಸೆನೆಟ್ ಸಭಾಂಗಣದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡೊಕ್ಟರ್ ಪೀಟರ್ ಪಾವ್ಲ್ ಸಲ್ಡಾನ್ಹಾ ಬಿಡುಗಡೆಗೊಳಿಸಿದರು. “ದೇವರ ವಾಕ್ಯವೆಂದರೆ ಅದು ಸೂರ್ಯನ ಬಿಸಿಲಿನಂತೆ. ಕೆಲವರು ಓದಿ ಒಳ್ಳೆಯವರಾದರೆ, ಇನ್ನು ಕೆಲವರು ದೇವರ ವಾಕ್ಯವನ್ನೇ ಓದಿ ಅನ್ಯಥಾ ಬಳಸುವುದೂ ಇದೆ. ದೇವರ ವಾಕ್ಯವನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಮರಿಯಾಣ್ ಪಾವ್ಲ್ ರೊಡ್ರಿಗಸ್ ಬರೆದಿರುವ ಈ ಪುಸ್ತಕ ಸಹಾಯಕಾರಿಯಾಗಲಿದೆ.” ಎಂದು ಧರ್ಮಾಧ್ಯಕ್ಷ ಡೊ| ಸಲ್ದಾನ್ಹಾ ಅಭಿಪ್ರಾಯಪಟ್ಟರು.

ಮಿಲಾಗ್ರಿಸ್ ಚರ್ಚಿನ ಪ್ರಧಾನ ಧರ್ಮಗುರುಗಳಾದ  ವಂ| ಬೊನವೆಂಚರ್ ನಜ್ರೆತ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೃತಿಕಾರ ಮರಿಯಾಣ್ ಪಾವ್ಲ್ ರೊಡ್ರಿಗಸ್ ಮಾತನಾಡಿ “ಯೇಸು ಕ್ರಿಸ್ತನ ಜೀವನದ ಕುರಿತು ಬರೆಯುವುದು ನನ್ನ ಬಹಳ ಹಳೆ ಆಸೆಯಾಗಿತ್ತು. ಆದರೆ ಸರಿಸುಮಾರು ಮೂವತ್ತು ವರ್ಷಗಳ ಕಾಲ ತಾನು ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಸೆ ಕೈಗೂಡಲಿಲ್ಲ. ನಿವೃತ್ತಿಯ ನಂತರ ತಾಯ್ನಾಡಿಗೆ ಮರಳಿದಾಗ ಮತ್ತೆ ಆಸೆ ಚಿಗುರಿತು. ಅದರೆ ಆರೋಗ್ಯದಲ್ಲಿ ಏರುಪೇರಾಯಿತು. ಆದರೂ ದೃತಿಗೆಡದೇ ಸತತ ಒಂಬತ್ತು ವರ್ಷಗಳ ಕಾಲ ಅಧ್ಯಯನ ಮಾಡಿ ಸುಮಾರು 540  ಪುಟಗಳ ಪುಸ್ತಕ ತಯಾರಿಸಿದ್ದೇನೆ. ಈ ಪುಸ್ತಕ ಪ್ರಕಟಣೆಗೆ ಅಧಿಕೃತ ಪರವಾನಿಗೆ ’ಇಂಪ್ರಿಮಾತುರ್’  ನೀಡಿದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಶರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಮತ್ತು ಸಹಕರಿದ ಎಲ್ಲರಿಗೂ, ಪ್ರತ್ಯೇಕವಾಗಿ ನನ್ನ ಕುಟುಂಬಕ್ಕೆ ಋಣಿ ಯಾಗಿದ್ದೇನೆ” ಎಂದರು.

ಯೇಸು ಕ್ರಿಸ್ತನ ಬಗ್ಗೆ ಜನರಿಗೆ ನೈಜ ಅರಿವು ನೀಡುವುದು ಮತ್ತು ಪುಸ್ತಕ ಮಾರಾಟದಿಂದ ಬರುವ ವರಮಾನದಿಂದ ದುರ್ಬಲ ವರ್ಗದವರಿಗೆ ಸಹಾಯ ಮಾಡುವುದು – ನನ್ನ ಉದ್ದೇಶವಾಗಿದೆ ಎಂದು ಮರಿಯಾಣ್ ಪಾವ್ಲ್ ರೊಡ್ರಿಗಸ್ ಈ ಸಂದರ್ಭದಲ್ಲಿ ನುಡಿದರು.      

ಪುಸ್ತಕ ಬಿಡುಗಡೆಯ ವೇಳೆ ಕೃತಿಕಾರರ ಧರ್ಮಪತ್ನಿ ಶ್ರೀಮತಿ ಜೆಸಿಂತಾ ರೊಡ್ರಿಗಸ್, ಪುತ್ರ ಡೊ| ಜೋನಾತನ್ ರೊಡ್ರಿಗಸ್ , ಪ್ರಕಾಶಕ ಸೆವಕ್ ಪ್ರಕಾಶನದ ವಂ| ಚೇತನ್ ಕಾಪುಚಿನ್, ಮಿಲಾಗ್ರಿಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ ಸಿಲ್ವೆಸ್ಟರ್ ಮಸ್ಕರೆನ್ಹಸ್ ಮತ್ತು ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್ ವೇದಿಕೆಯಲ್ಲಿ ಹಾಜರಿದ್ದರು.

ಹೆಸರಾಂತ ಕಲಾವಿದ ಶ್ರೀ ಎಡ್ಡಿ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಆರೊನ್ ಲೋಬೊ ವಂದಿಸಿದರು. ಕಾರ್ಯಕ್ರಮದಲ್ಲಿ ಮರಿಯಾಣ್ ಪಾವ್ಲ್ ರೊಡ್ರಿಗಸ್ ಅವರು ರಚಿಸಿ, ಸ್ವರಸಂಯೋಜನೆ ಮಾಡಿದ ಸ್ತುತಿಗೀತೆಗಳನ್ನು ಸಿಪ್ರಿಯನ್ ಮಾಸ್ತರರ ಸಂಗೀತ ನಿರ್ದೇಶನದಲ್ಲಿ ಮಿಲಾಗ್ರಿಸ್ ಚರ್ಚ್ ಯುವಗಾಯನ ಮಂಡಳಿಯ ಸದಸ್ಯರು ಹಾಡಿದರು.