ಕೋಲಾರ: ಸ್ವಾತಂತ್ರ್ಯ ಜ್ಯೋತಿ ಪ್ರತಿಯೊಬ್ಬರಲ್ಲಿ ಪ್ರಜ್ವಲಿಸಲಿ – ಬಿಇಒ ಕನ್ನಯ್ಯ

ಕೋಲಾರ: ಅನೇಕರ ತ್ಯಾಗಬಲಿದಾನಗಳ ಹೋರಾಟದಿಂದ ದೇಶದಲ್ಲಿ ಬ್ರಿಟೀಷರ ಅಂಧಕಾರ ಆಡಳಿತ ತೊಲಗಿ ಸ್ವಾತಂತ್ರ್ಯದ ಜ್ಯೋತಿ ಬೆಳಗುವಂತಾಯಿತು, ಈ ಜ್ಯೋತಿ ಪ್ರತಿ ಭಾರತೀಯರ ಮನೆ ಮನಗಳಲ್ಲಿ ಪ್ರಜ್ವಲಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ತಾಲೂಕು ಸಮಿತಿ, ಹಳೇ ಮಾಧ್ಯಮಿಕ, ಉರ್ದು ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಎಂದಿಗೂ ಸ್ವೇಚ್ಛಾಚಾರವಾಗಬಾರದು ಎಂದು ಎಚ್ಚರಿಸಿದ ಅವರು, ಪ್ರತಿ ಭಾರತೀಯರು ದೇಶದ ಐಕ್ಯತೆಗಾಗಿ ದುಡಿದರೆ ವಿಶ್ವದಲ್ಲಿಯೇ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ದೇಶದಲ್ಲಿರುವ ಪ್ರಾಕೃತಿಕ, ಸಾಮಾಜಿಕ, ರಾಜಕೀಯ, ಭಾಷೆ, ಆಹಾರ, ಉಡುಗೆ, ಬದುಕಿನ ವೈವಿಧ್ಯತೆಯನ್ನು ಕಾಪಾಡಿಕೊಂಡು ದೇಶದ ಏಕತೆ ಕಾಪಾಡುವ ಸವಾಲು ಎದುರಾಗಿದ್ದು, ಇದಕ್ಕಾಗಿ ಪ್ರತಿ ಭಾರತೀಯನು ಶ್ರಮಿಸಬೇಕೆಂದರು.
ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ಸ್ವಾತಂತ್ರ್ಯವನ್ನು ಅನುಭವಿಸುವುದರ ಜೊತೆಗೆ, ಸಂವಿಧಾನದ ಆಶಯಗಳಾದ ಸೌಹಾರ್ದತೆ, ಸಮಾನತೆಯನ್ನು ಸ್ವಾಭಿಮಾನದಿಂದ ಕಾಪಾಡಿಕೊಂಡು ದೇಶವನ್ನು ಮುನ್ನಡೆಸಬೇಕೆಂದರು.
ರೋಟರಿ ಸೆಂಟ್ರಲ್ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೇಶದ ಗಡಿ ಕಾಯುವ ಯೋಧ, ಆಹಾರ ಸ್ವಾವಲಂಬನೆಗೆ ಶ್ರಮಿಸುತ್ತಿರುವ ರೈತ, ಆರೋಗ್ಯ ಕಾಪಾಡುತ್ತಿರುವ ವೈದ್ಯ ಹಾಗೂ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಸೇವೆಯನ್ನು ಸ್ಮರಿಸಬೇಕೆಂದರು.
ವಿದ್ಯಾರ್ಥಿಗಳಾದ ಫಿಜಾ ಪರ್ವೀನ್ ಹಾಗೂ ಚೇತನ್ ಸ್ವಾತಂತ್ರ್ಯೋತ್ಸವ ಕುರಿತು ಭಾಷಣ ಮಾಡಿದರು.
ಭಾರತಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಪದಾಕಾರಿಗಳಾದ ಕೆ.ಜಯದೇವ್, ಗೋಕುಲ ಚಲಪತಿ, ಮುನಿವೆಂಕಟಯಾದವ್, ಪೈಂಟರ್ ಬಷೀರ್, ಬಿಇಒ ಕಚೇರಿ ಸಿಬ್ಬಂದಿ, ಹಳೇ ಮಾಧ್ಯಮಿಕ ಶಾಲಾ ಹಾಗೂ ಉರ್ದು ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಮಕ್ಕಳಿಗೆ ರೋಟರಿ ಸೆಂಟ್ರಲ್ ಹಾಗೂ ಸೇವಾದಳವತಿಯಿಂದ ಸಿಹಿ ವಿತರಿಸಲಾಯಿತು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮವನ್ನು ನಿರ್ವಹಿಸಿದರು.