ಗ್ರಹ ಜ್ಯೋತಿ ಯೋಜನೆಗೆ ಕುಂದಾಪುರದ ಜನಸಾಮಾನ್ಯರಿಂದ ಮೆಚ್ಚುಗೆ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಕುಂದಾಪುರ: ಜು.10:ಗ್ರಹ ಜ್ಯೋತಿ ಯೋಜನೆ ಅಡಿ ಕುಂದಾಪುರ ಮೆಸ್ಕಾಂ ಕಚೇರಿಯ ಉಪ ವಿಭಾಗದಲ್ಲಿ 21,300 ಫಲಾನುಭವಿ ಗ್ರಾಹಕರು ಈಗಾಗಲೇ ನೋಂದಾಯಿತರಾಗಿದ್ದಾರೆ.

ಕುಂದಾಪುರ ಪುರಸಭೆ ಮತ್ತು ಸುತ್ತಮುತ್ತಲಿನ 22 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಉಪ ವಿಭಾಗದಲ್ಲಿ ಒಟ್ಟು 31,200 ಬಳಕೆದಾರರಿದ್ದು 25,000 ಗ್ರಾಹಕರು ಮಾಸಿಕ 200 ಯೂನಿಟ್ ಮೀರದವರಿದ್ದಾರೆ ಎಂದು ಈ ಹಿಂದಿನ ಬಳಕೆಯಿಂದ ಅಂದಾಜಿಸಲಾಗಿದೆ.

ಇನ್ನು 3700 ಅರ್ಹ ಗ್ರಾಹಕರು ನೊಂದಣಿಗೆ ಬಾಕಿ ಉಳಿದಿದ್ದು, ನೊಂದಣಿಗೆ ಸಮೀಪದ ಸೇವಾ ಸಿಂಧು ,ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ನೋಂದಾಯಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊಗೆ ತಿಳಿಸಿದರು.

ಕೆಲವೆಡೆ ಒಂದು ಆರ್ ಆರ್ ನಂಬ್ರ ದಲ್ಲಿ ಎರಡು ಆಧಾರ್ ಕಾರ್ಡಿನಿಂದ ಎರಡು ಬಾರಿ ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು. ಗ್ರಾಮದಲ್ಲಿ ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು ಮೀಟರ್ ರೀಡಿಂಗ್ ನಡೆಸುತ್ತಿದ್ದು, ಶೂನ್ಯ ಬಿಲ್ ಗೆ ಕುಂದಾಪುರದ ಮಹಿಳೆಯರಿಂದ ಮತ್ತು ಜನಸಾಮಾನ್ಯರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದರು.