ನವದೆಹಲಿ:ಆ.೮: ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರವಾಗಿ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆಯಲ್ಲಿ ಬುಧವಾರ ಅವಿಶ್ವಾಸ ನಿರ್ಣಯದ ಕುರಿತು ನೋಟಿಸ್ ನೀಡಿದರು. ಕಾಂಗ್ರೆಸ್ ಮಾತ್ರವಲ್ಲದೆ ತೆಲಂಗಾಣದ ಆಡಳಿತ ಪಕ್ಷ ಬಿಆರ್ಎಸ್ ಕೂಡ ಪ್ರತ್ಯೇಕ ಅವಿಶ್ವಾಸ ನಿರ್ಣಯ ಮಂಡಿಸಿದೆ.
ಸಭಾಪತಿ ಓಂಬಿರ್ಲಾ ಅವಿಶ್ವಾಸ ನಿರ್ಣಯ ನೋಟಿಸ್ ಸ್ವೀಕರಿಸಿದ್ದು, ಶೀಘ್ರದಲ್ಲಿ ಚರ್ಚೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮಣಿಪುರದ ಬಗ್ಗೆ ಮೌನ ತಾಳಿರುವ ಪ್ರಧಾನಿಯಿಂದ ಹೇಳಿಕೆಗಳು ಬರಬೇಕು ಎಂದು ನಿರ್ಧರಿಸಿರುವ ವಿಪಕ್ಷಗಳು ಕಡೆಯ ಅಸ್ತ್ರ ಎನ್ನುವಂತೆ ಅವಿಶ್ವಾಸ ನಿರ್ಣಯ ಮಂಡಿಸಿವೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡಲು ಸರ್ಕಾರವೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ ಹೇಳಲಾಗುತ್ತದೆ.
ತಮ್ಮ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡಲಿದ್ದಾರೆ. ಇದರಲ್ಲಿ ಎರಡು ರೀತಿಯಲ್ಲಿ ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡಬಹುದು ಎನ್ನಲಾಗುತ್ತಿದೆ. ಮೊದಲನೆಯದಾಗಿ ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಬಿಜೆಪಿಯೇತರ ರಾಜ್ಯಗಳ ಅಂಕಿ ಅಂಶಗಳು ಮತ್ತು ಘಟನೆಗಳನ್ನು ಉಲ್ಲೇಖಿಸಿ ಮತ್ತು ಎರಡನೆಯದಾಗಿ ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ. ಮಣಿಪುರದ ಹಿಂಸಾಚಾರವನ್ನು ಪ್ರಸ್ತಾಪಿಸಿ ಅದಕ್ಕಿಂತ ಹೆಚ್ಚು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಪ್ರಮುಖ ಘಟನೆಗಳನ್ನು ಉಲ್ಲೇಖಿಸಬಹುದು ಎಂದು ಅನುಮಾನ ಪಡಲಾಗಿದೆ.