ಪಟ್ಟಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ನಾಡಪ್ರಭು ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ಆಚರಿಸಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಪಟ್ಟಣದಲ್ಲಿ ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಆ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕೆಂಪೇಗೌಡ ಜಯಂತಿ ಆಚರಿಸುವ ಕುರಿತು ಚರ್ಚಿಸಲು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಯಾವುದೇ ಒಂದು ಸಮುದಾಯಕ್ಕೆ ಮೀಸಲಾಗದಂತೆ ಎಚ್ಚರಿಕೆ ವಹಿಸಬೇಕು. ಆಚರಣೆ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿರಬೇಕು. ಸಮುದಾಯ ಸಾಂಘಿಕವಾಗಿ ಜಯಂತಿ ಆಚರಿಸಬೇಕು. ಜಯಂತಿ ಸಮಾರಂಭದಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಜಯಂತಿ ಆಚರಣೆಗೆ ಮೊದಲು ಸಮುದಾಯದ ಮುಖಂಡರು ಇನ್ನೊಂದು ಪೂರ್ವಭಾವಿ ಸಭೆ ನಡೆಸಿ, ಆಚರಣೆ ಬಗ್ಗೆ ರೂಪರೇಷೆ ರೂಪಿಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಡಾಂಬರು ಹಾಕಬೇಕು. ಚಿಂತಾಮಣಿ ಸರ್ಕಲ್‍ನಿಂದ ಬಸ್ ನಿಲ್ದಾಣದ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಆ.15 ರಂದು ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಏರ್ಪಡಿಸಲಾಗಿದೆ. ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಾರಂಭದಲ್ಲಿ ಭಾಗವಹಿಸಬೇಕು. ಹಿಂದಿದ ದಿನ ರಾತ್ರಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂದಾರ ಮಾಡಬೇಕು. ಕೆಂಪೇಗೌಡ ಜಯಂತಿ ಸಮಾರಂಭ ಆ.27ರಂದು ಮಧ್ಯಾಹ್ನ ಅದೇ ಮೈದಾನದಲ್ಲಿ ನಡೆಯಲಿದೆ. ನಿಯಮಾನುಸಾರ ಜಯಂತಿ ಆಚರಣೆಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಕಾರ್ಯದರ್ಶಿ ಮೀಸಗಾನಹಳ್ಳಿ ವೆಂಕಟರೆಡ್ಡಿ, ಭೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಗೊಪಾಲಕೃಷ್ಣ, ಲಕ್ಷ್ಮಣರೆಡ್ಡಿ ಮಾತನಾಡಿ ಆಚರಣೆ ಕುರಿತು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತೋಟಗಾರಿಕಾ ಇಲಾಖೆ
ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸ್, ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮತೀರ್ಥ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ನಾಗರಾಜು, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಆರ್.ದಯಾನಂದ್ ಮತ್ತಿತರರು ಇದ್ದರು.