ಯಕ್ಷಗಾನಕ್ಕೂ ಕುಂದಾಪ್ರ ಕನ್ನಡಕ್ಕೂ ಅವಿನಾಭಾವ ಸಂಬಂಧ


ಬೀಜಾಡಿ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಎ.ಎಸ್ .ಎನ್ ಹೆಬ್ಬಾರ್
ಬೀಜಾಡಿ: ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ, ಪ್ರೀತಿ ಇರಬೇಕು.ಯಕ್ಷಗಾನಕ್ಕೂ ಕುಂದಾಪ್ರ ಕನ್ನಡಕ್ಕೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದ ಹಾಸ್ಯ ಕಲಾವಿದರು ಹಿಂದಿನಿಂದಲೂ ಕುಂದಾಪ್ರ ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಹಿರಿಯ ಸಾಹಿತಿ ಎ.ಎಸ್.ಎನ್ ಹೆಬ್ಬಾರ್ ಹೇಳಿದರು.
ಅವರು ಸೋಮವಾರ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್,
ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಇವರ ಸಹಯೋಗದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 4ನೇ ವರ್ಷ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಸಮಾರಂಭದಲ್ಲಿ ಆಶಯದ ಮಾತುಗಳನ್ನಾಡಿದರು.
ಕುಂದಾಪ್ರ ಕನ್ನಡ ಭಾಷೆಯ ಅಧ್ಯಯವಾಗಬೇಕು. ಈ ಭಾಷೆಯನ್ನು ಉಳಿಸಿ ಬೆಳೆಸಬೇಕಾದರೇ ನಾವು ಅನುದಿನವು ಕುಂದಾಪ್ರ ಕನ್ನಡವನ್ನು ಮಾತನಾಡಬೇಕು ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕ ಬೀಜಾಡಿ ನಾರಾಯಣ ಆಚಾರ್ ಅವರನ್ನು ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ಧಿಂಸಾಲ್,ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳದ ಅಧ್ಯಕ್ಷ ನಾಗರಾಜ ಬಿ.ಜಿ ಭತ್ತ ಕುಟ್ಟುವ ಹಾಡನ್ನು ಹಾಡಿದರು. ರೋಟರಿ ಕುಂದಾಪುರ ರಿವರ್‍ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ ಮೊಗವೀರ, ಕಾರ್ಯದರ್ಶಿ ಗಿರೀಶ್ ಕೆ.ಎಸ್., ರೋಟರಿ ಕುಂದಾಪುರ ರಿವರ್‍ಸೈಡ್ ಕಾರ್ಯದರ್ಶಿ ಡಾ.ವಿಲಾಶ್‍ಕೃತಿಕ್ ಉಪಸ್ಥಿತರಿದ್ದರು. 4ನೇ ವರ್ಷದ ಕುಂದಾಪುರ ಕನ್ನಡ ದಿನಾಚರಣೆಯ ಅದೃಷ್ಟವಂತರಾಗಿ ಹರೀಶ್ ಮೊಗವೇರ, ಕುಂದಾಪ್ರ ಕನ್ನಡದ ಅತೀ ಹೆಚ್ಚು ದೈವ ದೇವರ ಹೆಸರನ್ನು ಹೇಳಿದ ಕೃಷ್ಣ ಗೋಳಿಬೆಟ್ಟು, ಕುಂದಾಪ್ರ ಭಾಗದಲ್ಲಿ ಆಚರಿಸುವ ಅತೀ ಹೆಚ್ಚು ಹಬ್ಬಗಳ ಹೆಸರನ್ನು ಹೇಳಿದ ಶಾರದಾ ಗಾಣಿಗ ಬಹುಮಾನ ಪಡೆದರು. ಅನುಪ್‍ಕುಮಾರ್ ಬಿ.ಆರ್ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಪಾಂಡುರಂಗ ವಂದಿಸಿದರು.