ನಕಲಿ ಕೀಟನಾಶಕ ಬಿತ್ತನೆ ಬೀಜ ಮಾರಾಟಗಾರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ,ಮಾರುಕಟ್ಟೆಗೆ ಜಮೀನು ಮಂಜೂರು ಮಾಡಿ, ಒತ್ತುವರಿ ಕೆರೆ,ರಾಜಕಾಲುವೆ ತೆರವುಗೊಳಿಸಿ

ಕೋಲಾರ, ಜು-8, ನಕಲಿ ಕೀಟನಾಶಕ ಬಿತ್ತನೆ ಬೀಜ ಮಾರಾಟಗಾರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು ಮಾಡುವ ಜೊತೆಗೆ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ತೆರವುಗೊಳಿಸಲು ವಿಶೇಷ ಕಂದಾಯ ಅಧಿಕಾರಿಗಳ ತಂಡ ರಚನೆ ಮಾಡುವಂತೆ ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಬಿಂಗಿ ರೋಗದಿಂದ ನಷ್ಟವಾಗಿರುವ ಟೆಮೇಟೋ ಸಮೇತ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿ ನಕಲಿ ಔಷಧಿ ಕಂಪನಿಗಳ ಸೇವಕರಾಗಿ ಕೃಷಿ ತೋಟಗಾರಿಕೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಸಚಿವರಿಗೆ ಮನವರಿಕೆ ಮಾಡಿದರು.


5 ವರ್ಷಗಳಿಂದ ಜಿಲ್ಲೆಯ ರೈತರು ಬೆಳೆಯುವ ಬೆಳೆಗಳಿಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ಇಲ್ಲದೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಕಣ್ಣು ಮುಂದೆಯೇ ನಾಶವಾಗಿ ಸಾಲದ ಸುಲಿಗೆ ಸಿಲುಕುತ್ತಿರುವ ರೈತನ ರಕ್ಷಣೆಗೆ ಕೃಷಿ ತೋಟಗಾರಿಕೆ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವರಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರು ನೀಡಿದರು.


10 ರೂಪಾಯಿ ಸೊಳ್ಳೆಬತ್ತಿ ಮನೆಯ ಸೊಳ್ಳೆಗಳನ್ನು ಸಾಯಿಸುತ್ತದೆ. ಲಕ್ಷಾಂತರ ರೂಗಳನ್ನು ನೀಡಿ ಖರೀದಿ ಮಾಡುವ ಔಷಧಿಗಳು ಸಿಂಪಡಣೆ ಮಾಡಿದರೂ ಕನಿಷ್ಠ ಪಕ್ಷ ಗಿಡದ ಮೇಲಿನ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕಳಪೆಯಾಗಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳ ಹಾಗೂ ಅಂಗಡಿ ಮಾಲೀಕರ ಜೊತೆ ಶಾಮೀಲಾಗಿದ್ದಾರೆಂದು ಆರೋಪ ಮಾಡಿದರು.
ಮಾರುಕಟ್ಟೆಯಲ್ಲಿ ಟೆಮೊಟೋ ಬೆಲೆ ಗಗನಕ್ಕೇರಿದ್ದರೂ ಜಿಲ್ಲಾದ್ಯಂತ ರೈತರು ಬೆಳೆದಿರುವ ಸಾವಿರಾರು ಹೆಕ್ಟರ್ ಟೆಮೋಟೋ ಬಿಂಗಿ ರೋಗಕ್ಕೆ ತುತ್ತಾಗಿ ನಾಶವಾಗಿದ್ದರೂ ಇದಕ್ಕೆ ಕಾರಣವನ್ನು ಇದುವರೆಗೂ ಅಧಿಕಾರಿಗಳು ನೀಡಿಲ್ಲ. 3800 ಕಂಪನಿಗಳು 480 ಜನ ಮಾರಾಟಗಾರರು 1200 ಅಂಗಡಿಗಳಿದ್ದರೂ ಯಾವುದೇ ಗುಣಮಟ್ದ ಔಷಧಿ ಸಿಗದೆ ಪ್ರತಿಯೊಂದು ನಕಲಿ ಔಷಧಿಯನ್ನು ಕಂಪನಿಗಳು ನೇರವಾಗಿ ರಾತ್ರಿವೇಳೆ ರೈತರಿಗೆ ಮಾರಾಟ ಮಾಡಲು ಅಧಿಕಾರಿಗಳೇ ಕುಮಕ್ಕು ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದರು.
ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಏಷ್ಯಾದಲ್ಲೆ 2ನೇ ಅತಿದೊಡ್ಡ ಮಾರುಕಟ್ಟೆಯಂದು ಹೆಗ್ಗಳಿಕೆ ಪಡೆದಿರುವ ಎ.ಪಿ.ಎಂ.ಸಿ. ಮಾರುಕಟ್ಟೆಯ ಜಾಗದ ಸಮಸ್ಯೆಗೆ 100 ಎಕರೆ ಜಮೀನು ಮಂಜೂರು ಮಾಡಲು 10 ವರ್ಷಗಳಿಂದ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರಗಳ ಗಮನ ಸಳೆದರು ಇದುವರೆವಿಗೂ ಜಾಗದ ಸಮಸ್ಯೆ ಬಗೆ ಹರಿದಿಲ್ಲ. ಮಾನ್ಯರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ರಾಜಕಾಲುವೆಗಳು ಒತ್ತುವರಿಯಾಗಿದ್ದು, ಇದರಿಂದ ಕೆರೆಗೆ ಹರಿಯಬೇಕಾದ ಮಳೆ ನೀರು ರೈತರ ಬೆಳೆಗಳು ಹಾಗೂ ಬಡವರ ಮನೆಗಳಿಗೆ ಹರಿಯುತ್ತಿವೆ. ಈ ಸಮಸ್ಯೆಗೆ ಮೂಲಕಾರಣ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳ ತೆರವುಗೊಳಿಸಲು ವಿಫಲವಾಗಿರುವ ಜಿಲ್ಲಾಡಳಿತವೇ ಮೂಲಕಾರಣವಾಗಿವೆ. ಮಾನ್ಯರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೆರೆ, ರಾಜಕಾಲುವೆ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಲ್ಲಣ್ಣ, ಹರೀಶ್, ಮಂಗಸಂದ್ರ ತಿಮ್ಮಣ್ಣ, ನರಸಿಂಹಯ್ಯ, ವೆಂಕಟೇಶಪ್ಪ, ಕುವಣ್ಣ, ಗಿರೀಶ್, ಮುಂತಾದವರು ಇದ್ದರು.