ಶ್ರೀನಿವಾಸಪುರ: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು

ಶ್ರೀನಿವಾಸಪುರ: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು. ಪಟ್ಟಣದ ಹೊರವಲಯದಲ್ಲಿನ ಈದ್ಗಾ ಮೈದಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಸಮುದಾಯದ ನಾಗರಿಕರು ಪರಸ್ಪರ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲವು ಮುಸ್ಲಿಂ ಸಮುದಾಯದವರು ತಂಪು ಪಾನೀಯ ವಿತರಿಸಿದರು.
ಹಬ್ಬದ ಪ್ರಯುಕ್ತ ಬಡವರಿಗೆ ಮಾಂಸ ದಾನ ಮಾಡಲಾಯಿತು. ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿತ್ತು. ಮಧ್ಯಾಹ್ನದ ಹೊತ್ತಿಗೆ ಮಾಂಸದ ಅಂಗಡಿಗಳಲ್ಲಿ ಮಾಂಸ ಮುಗಿದುಹೋಗಿತ್ತು. ಮುಸ್ಲಿಂ ಸಮುದಾಯದಿಂದ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಬಂದ ಪರಿಣಾಮವಾಗಿ ಬೇರೆಯವರಿಗೆ ಕುರಿ ಮಾಂಸ ಸಿಗುವುದು ಕಷ್ಟವಾಗಿತ್ತು. ಕುರಿ ತಲೆ ಮತ್ತು ಕಾಲಿನ ವ್ಯಾಪಾರ ಜೋರಾಗಿ ನಡೆಯಿತು. ಕುರಿ ಮಾಂಸ ಕೆಜಿಯೊಂದಕ್ಕೆ ರೂ.700 ರಂತೆ ಮಾರಾಟ ಮಾಡಲಾಯಿತು.
ಬಕ್ರೀದ್ ಪ್ರಯುಕ್ತ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಲ್ಲೂಕಿನ ಗೌನಿಪಲ್ಲಿ, ಅಡ್ಡಗಲ್, ಮುದಿಮಡಗು, ಯಚ್ಚನಹಳ್ಳಿ ಸೇರಿದಂತೆ ಮುಸ್ಲಿಮರು ವಾಸಿಸುವ ಗ್ರಾಮಗಳಲ್ಲಿ ಬಕ್ರೀದ್ ಆಚರಣೆ ಮಾಡಲಾಯಿತು. ಈದ್ಗಾ ಮೈದಾನಕ್ಕೆ ಒಟ್ಟಾಗಿ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.