ವಿದ್ಯಾರ್ಥಿಗಳುು ಮಾದಕ ಪದಾರ್ಥ ಸೇವನೆಯಿಂದ ದೂರವಿರಬೇಕು : ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ

ಶ್ರೀನಿವಾಸಪುರ: ವಿದ್ಯಾರ್ಥಿಗಳುು ಮಾದಕ ಪದಾರ್ಥ ಸೇವನೆಯಿಂದ ದೂರವಿರಬೇಕು ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪೊಲೀಸ್ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಅಂತರ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಮಾದಕ ವಸ್ತು ವಿರೋಧಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತು ಸೇವನೆ ಮತ್ತು ಅಕ್ರಮ ಮಾರಾಟ ಕಾನೂನು ಬಾಹಿರ. ನಗರ ಪ್ರದೇಶದ ಕೆಲವು ವಿದ್ಯಾರ್ಥಿಗಳು ಅಂಥ ದಂಧೆಯಲ್ಲಿ ತೊಡಗಿರುವುದು ದುರದೃಷ್ಟಕರ ಬೆಳವಣಿಗೆ. ಮಾನವೀಯತೆ ಮರೆಯುವಂತೆ ಮಾಡುವ, ಅಪರಾಧ ಪ್ರೋತ್ಸಾಹಿಸುವ ಹಾಗೂ ಆರೋಗ್ಯಕ್ಕೆ ಮಾರಕವಾದ ಮಾದಕ ದ್ರವ್ಯ ಸೇವನೆ ಮಾಡಬಾರದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಮದ್ಯಪಾನ ಮತ್ತು ಅಮಲು ಪದಾರ್ಥ ಸೇವನೆ ಮನುಷ್ಯನ್ನು ದುರ್ಬಲಗೊಳಿಸುತ್ತದೆ. ಮಾದಕ ಪದಾರ್ಥಕ್ಕೆ ದಾಸನಾದ ವ್ಯಕ್ತಿ ಮಾನವೀಯತೆ ಮರೆತು ವರ್ತಿಸುವುದುಂಟು. ಆದ್ದರಿಂದಲೇ ಗಾಂಧೀಜಿ ಮದ್ಯಪಾನ ವ್ಯಕ್ತಿಯ ಆತ್ಮವನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಜನರಲ್ಲಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಅದು ಬಡತನ ಮತ್ತು ಅಪರಾಧಕ್ಕೆ ಕಾರಣವಾಗುತ್ತದೆ ಎಂಬ ಸತ್ಯ ತಿಳಿಸಬೇಕು. ಯಾವುದೇ ಕಾರಣಕ್ಕೂ ಮಾದಕ ಪದಾರ್ಥ ಮುಟ್ಟಬಾರದು ಎಂದು ಹೇಳಿದರು.
ವಿದ್ಯಾರ್ಥಿನಿಯರು, ಶಿಕ್ಷಕರು ಹಾಗೂ ಉಪನ್ಯಾಸಕರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಅಮಲು ಪದಾರ್ಥ ಸೇವನೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು.
ಉಪ ಪ್ರಾಂಶುಪಾಲ ಶ್ರೀಧರ್, ತಾಲ್ಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ ಇದ್ದರು.