ಟಿವಿಗಾಗಿ ಎರಡು ಜೀವಗಳ ದುರಂತ ಸಾವು : ದಂಪತಿಗಳ ದಾರುಣ ಅಂತ್ಯ – ಅನಾಥರಾದರು ಇಬ್ಬರು ಮಕ್ಕಳು

ಕಾರ್ಕಳ, ಜೂ 25:  ತಾಲೂಕಿನ ನಲ್ಲೂರು ಹುರ್ಲಾಡಿ ಎಂಬಲ್ಲಿ ಮುಂಬಯಿಯ ಸಾಹುಕಾರ ಊರಿನ  ತೋಟದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಿದ್ದಿ ಜನಾಂಗದ ದಂಪತಿಗಳ ನಡುವೆ ರವಿವಾರ ಬೆಳಿಗ್ಗೆ ಟಿವಿ ಮಾರಾಟದ ವಿಚಾರದಲ್ಲಿ ಜಗಳ ಉಂಟಾಗಿದ್ದು ಇದರಿಂದ ನೊಂದ ಪತ್ನಿ ಕೆರೆಯೊಂದಕ್ಕೆ ಹಾರಿದಳು, ಆಕೆಯ ರಕ್ಷಣೆಗೆ ಮುಂದಾದ ಆಕೆಯ ಪತಿಯೂ ಕೂಡಾ ಅದೇ ಕೆರೆಗೆ ಹಾರಿದ್ದಾನೆ, ಆದರೆ ಅವರಿಬ್ಬರೂ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅವರು ಮೂಲತಹ ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ಧಿ (40) ಹಾಗೂ ಯಶೋಧಾ (32) ಎಂಬವರು ದುರಂತ ಸಾವಿಗೆ ಒಳಗಾದ ದಂಪತಿ ಎಂದು ಗುರುತಿಸಲಾಗಿದೆ.

ಸಿದ್ದಿ ಜನಾಂಗದವರಾಗಿದ್ದ ಇವರು ಕಳೆದ ಎರಡು ವರ್ಷಗಳಿಂದ ಮುಂಬಯಿ ಹೋಟೆಲ್ ಉದ್ಯಮಿ ನಲ್ಲೂರು ಹುರ್ಲಾಡಿ ರಘುವೀರ್ ಶೆಟ್ಟಿ ಅವರ ತೋಟದ ಕೆಲಸ ಮಾಡಿಕೊಂಡಿದ್ದರು. ಉತ್ತಮ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ದಂಪತಿಗಳ ನಡುವೆ ಇತ್ತೀಚಿನ ದಿನಗಳಲ್ಲಿ ಇಮ್ಯಾನುಲ್ ಸಿದ್ಧಿ (40) ಕುಡಿತದ ಚಟ ಹೊಂದಿಕೊಂಡಿದ್ದನು ಎಂದು. ತಿಳಿದುಬಂದಿದೆ. ದಂಪತಿಗಳ ಇಬ್ಬರು ಮಕ್ಕಳುಗಳಾದ ಸಾಲೂವ್ (11) ಐರೀನ್(10) ಸ್ಥಳೀಯ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮಕ್ಕಳಿಂದ ದೊರಕಿದ ಮಾಹಿತಿ ಪ್ರಕಾರ ರವಿವಾರ ಬೆಳಿಗ್ಗೆ ಇಮ್ಯಾನುಲ್ ಸಿದ್ಧಿ ತನ್ನ ಪತ್ನಿಯಲ ಜೊತೆ ಮನೆಯಲ ಟಿ ವಿ ಯನ್ನು ಮಾರಾಟ ಮಾಡುವ ಬಗ್ಗೆ ಮಾತು ಬೆಳೆಸಿದ್ದಾನೆ.. ಅದಕ್ಕೆ ಪತ್ನಿ ಯಶೋಧ ಆಕ್ಷೇಪ ವ್ಯಕ್ತ ಪಡಿಸಿದಾಗ ಅವರೊಳಗೆ ಜಗಳ ಏರ್ಪಟ್ಟು,  ಯಶೋಧ ಮನೆಯಿಂದ ಓಡಿ ಹೋಗಿ ಸಮೀಪದ ಕೆರೆಗೆ ಹಾರಿದ್ದಾಳೆ, ಪತ್ನಿಯ ಜೀವ ಕಾಪಾಡಲು ಅದೇ ಕೆರೆಗೆ ಹಾರಿದ್ದಾನೆ, ಆದರೆ ಇಮ್ಯಾನುಲ್ ಸಿದ್ಧಿ ಎರಡು ಮೂರು ಸಲ ನೀರಿನಿಂದ ಮೇಲೆ ಕೆಳಗೆ ಹೋದರೂ ನಾಲ್ಕನೇ ಬಾರಿ ಆತ ಕೂಡಾ ಅದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇಮ್ಯಾನುಲ್ ಸಿದ್ಧಿ ಈಜುಗಾರನಾಗಿದ್ದರೂ ಪತ್ನಿಯನ್ನು ರಕ್ಷಿಸಲು ಅಸಾಧ್ಯವಾಗಿ ಅದೇ ಕೆರೆಯಲ್ಲಿ ಆತ್ಮಹತ್ಯೆ ಗೈದಿರಬೇಕೆಂದು ಶಂಕಿಸಲಾಗಿದೆ. ಈ ಎಲ್ಲಾ ದೃಶ್ಯಾವಳಿಯು ದಂಪತಿಯ ಮಕ್ಕಳು ಕಣ್ಣಾರೆ ಕಂಡಿದ್ದಾರೆ ಒಟ್ಟಾರೆಯಾಗಿ ಕುಡಿತ ಮತ್ತು ಟಿವಿ ದೆಸೆಯಿಂದ ಎರಡು ಜೀವ ಹೋಗಿ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಪೊಲೀಸ್ ಸಿಬ್ಬಂದಿಗಳು ಅಗಮಿಸಿ ಅಗತ್ಯ ಮಾಹಿತಿಗಳನ್ನು ಕಲೆಹಾಕಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿಸಲಾಗಿದೆ. ಶವಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ

.