
ಶ್ರೀನಿವಾಸಪುರ: ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯ ಮಂಡಳಿ ಟ್ರಸ್ಟ್, ಲಲಿತಾ ಮಹಿಳಾ ಸಂಘ ಹಾಗೂ ವಾಸವಿ ಯುವಕದ ವತಿಯಿಂದ ಶನಿವಾರ ದೇವಾಲಯದ 32ನೇ ವಾರ್ಷಿಕೋತ್ಸವ ಆಚರಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದಲ್ಲಿ ದೇವಿ ವಿಗ್ರಹಕ್ಕೆ ವಿಶೇಷ ಅಲಂಕಾರ ಹಾಗೂ ಅಕ್ಕಿ ಅಭಿಷೇಕ ಮಾಡಲಾಯಿತು. ಲಲಿತಾ ಮಹಿಳಾ ಮಂಡಳಿ ಸದಸ್ಯರ ವತಿಯಿಂದ ಕನ್ಯಕಾಪರಮೇಶ್ವರಿ ಕುರಿತ ಭಕ್ತಿ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು. ಪಿಯುಸಿ ವಿಜ್ಞಾನ ವಿಷಯದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಗಂಗೋತ್ರಿ ಪಿಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್, ಸ್ನಾತಕೋತ್ತರ ಪದವಿ ಪಡೆದ ಎಂ.ಬಿ.ಮೃದುಲ ಸುರೇಖಾ ಹಾಗೂ ಪಿ.ಎಸ್.ನಾಗಧೀರಜ್ ಅವರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಆರ್ಥಿಕ ನೆರವು ನೀಡಲಾಯಿತು.
ತಾಲ್ಲೂಕು ಆರ್ಯವೈಶ್ಯ ಟ್ರಸ್ಟ್ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್, ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣಶೆಟ್ಟಿ, ರಾಜ್ಯ ಆರ್ಯವೈಶ್ಯ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಆರ್.ಅಮರನಾಥ್ ಕಾರ್ಯಕ್ರಮದ ನೇತೃತ್ವ ಹಿಸಿದ್ದರು.