ಕೋಲಾರ ಜಿಲ್ಲಾ ಸರ್ವೇ,ಕಂದಾಯ ಇಲಾಖೆಯಿಂದ ಅಭಿನಂದನೆ, ಕಂದಾಯ ಇಲಾಖೆ ಜನಸ್ನೇಹಿಯಾಗಿಸೋಣ-ಸಚಿವ ಕೃಷ್ಣಬೈರೇಗೌಡ

ಕೋಲಾರ:- ಸದಾ ರೈತರು,ಸಾರ್ವಜನಿಕರ ಸಂಪರ್ಕ ಹೊಂದಿರುವ ಕಂದಾಯ,ಸರ್ವೇ ಇಲಾಖೆಗಳು ಜನರ ನಿರೀಕ್ಷೆಯಂತೆ ಕೆಲಸ ಮಾಡಿ ಜನಸ್ನೇಹಿಯಾಗಿಸಲು ಇಲಾಖೆ ನೌಕರರು ಹೆಚ್ಚಿನ ಹೊಣೆಗಾರಿಕೆಯಿಂದ ಸೇವೆ ಸಲ್ಲಿಸಬೇಕಿದೆ ಎಂದು ರಾಜ್ಯದ ನೂತನ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಕಂದಾಯ ಸಚಿವರಾದ ನಂತರ ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳ ಭೂಮಾಪನ ಹಾಗೂ ಕಂದಾಯ ಇಲಾಖೆಗಳಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕಚೇರಿಗಳಿಗೆ ಬರುವ ರೈತರನ್ನು ಅಲೆಸದೇ ಜನಪರವಾಗಿ ಕೆಲಸ ಮಾಡೋಣ, ನೌಕರರ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಪರಿಹರಿಸುವೆ ಆದರೆ ಜನರ ಕಷ್ಟಗಳಿಗೆ ನೀವೂ ಸ್ಪಂದಿಸುವ ಮೂಲಕ ಇಲಾಖೆಗೆ ಕಳಂಕ ಎದುರಾಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಸರ್ವೇ ಹಾಗೂ ಕಂದಾಯ ಇಲಾಖೆ ಇತರೆಲ್ಲಾ ಇಲಾಖೆಗಳಿಗಿಂತ ಒತ್ತಡದಲ್ಲಿ ಕೆಲಸ ಮಾಡಬೇಕಿದೆ ಎಂಬುದು ಸತ್ಯ ಆದರೆ ಜನರ ಸೇವೆ ಮಾಡುವಾಗ ನಾವೂ ಮುಂಚೂಣಿಯಲ್ಲಿರಬೇಕು, ಕಂದಾಯ,ಸರ್ವೇ ಇಲಾಖೆ ನೌಕರರು ಅನ್ನದಾತರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಸೂಚಿಯೊಂದಿಗೆ ಕೆಲಸ ಮಾಡಬೇಕು, ಇಲಾಖೆಯಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡಲು ಹೊಸ ಹೊಸ ವಿಧಾನಗಳ ಅಳವಡಿಕೆ ಅಗತ್ಯವಿದೆ ಈ ನಿಟ್ಟಿನಲ್ಲಿ ಅನುಭವಿ ಅಧಿಕಾರಿಗಳ ಸಲಹೆಯೂ ಸ್ವೀಕೃತ ಎಂದ ಅವರು, ಒಟ್ಟಾರೆ ಜನರ ಕೆಲಸವನ್ನು ನಾವು ಜನಪರವಾಗಿ ಜನತೆಗೆ ತೊಂದರೆಯಾಗದಂತೆ ನಿರ್ವಹಿಸೋಣ ಎಂದರು.
ಈ ಸಂದರ್ಭದಲ್ಲಿ ಭೂಮಾಪನಾ ಇಲಾಖೆ ಕೋಲಾರ ಜಿಲ್ಲಾ ಉಪನಿರ್ದೇಶಕರಾದ ಭಾಗ್ಯಮ್ಮ, ಬೆಂಗಳೂರು ಕೇಂದ್ರ ಉಪನಿರ್ದೇಶಕ ಕೇಶವಮೂರ್ತಿ, ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಪ್ರಧಾನ ಕಾರ್ಯದರ್ಶಿ ಅಜಯ್‍ಕುಮಾರ್, ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ, ಸರ್ವೇ ಇಲಾಖೆಯ ಕೇಶವ್, ನಾಗರಾಜ್ ಮತ್ತಿತರರಿದ್ದರು.