ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗೆ ಪುನರ್ವಸತಿ ಕಲ್ಪಿಸಿ

ಕೋಲಾರ,ಜೂ,2: ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಹಾಗೂ ಪುನರ್ವಸತಿ 2013ರ ಕಾಯ್ದೆಯ ಅನುಷ್ಟಾನಕ್ಕೆ ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಲ ಹೊರುವ ಪದ್ದತಿ ಅಮಾನವೀಯ, ಜಾತೀಯತೆ ಮತ್ತು ಗುಲಾಮಗಿರಿಯ ಸಂಕೇತ, ಮನುಷ್ಯನ ಘನತೆಗೆ ಧಕ್ಕೆ ತರುವ ನಾಗರಿಕ ಸಮಾಜದ ಸಾಕ್ಷಿಪ್ರಜ್ಞೆಗೆ ಸಾವಾಲಾಗಿ ಇಡೀ ಸಮಾಜ ತಲೆ ತಗ್ಗಿಸುವ ಹಾಗು ಘೋರ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ಮಲಹೊರುವ ಅನಿಷ್ಟ ಪದ್ದತಿಯನ್ನು ನಿರ್ಮೂಲನೆ ಹಾಗು ಸ್ಕ್ಯಾವೆಂಜರ್ ಸಮುಧಾಯಗಳನ್ನು ಘನತೆ ಗೌರವದಿಂದ ಸಮಾಜದ ಮುಖ್ಯ ವಾಹಿನಿಗೆ ತರುವ ಆಶಯದೊಂದಿಗೆ ಕೋಲಾರ ಜಿಲ್ಲೆಯಲ್ಲಿ 2013, 2018ರ ನಡುವೆ ಸಮೀಕ್ಷೆಯಲ್ಲಿ ಕೋಲಾರ ಜಿಲ್ಲೆಯ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ 1000 ಕ್ಕೂ ಹೆಚ್ಚು ಜನರನ್ನು ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಎಂದು ಗುರುತಿಸಿ ನೊಂದಣೆ ಮಾಡಿಕೊಂಡಿದ್ದಾರೆ. ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ರ ಸೆಕ್ಷನ್ 13 ರ ಪ್ರಕಾರ ಪುನರ್ವಸತಿ ಒದಗಿಸುವ ಅಗತ್ಯವಿದೆ. ಸದರಿ ಕಾಯ್ದೆಯ ಸೆಕ್ಷನ್ 13 (1) ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಪರ್ಯಾಯ ಉದ್ಯೋಗ ಹಾಗೂ ಸಹಾಯಧನ ಮತ್ತು ರಿಯಾಯಿತಿ ಸಾಲವನ್ನು ನೀಡಬೇಕು.
ಆದರೆ 2020-21, 2021-22 ಹಾಗು 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದು, ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಆರ್ಥಿಕ ನೆರವು ನೀಡಲಾಗಿಲ್ಲ. ಈ ಅರ್ಜಿದಾರರು 8-10 ವರ್ಷಗಳಿಂದ ಅಂದಿನಿಂದ ಇಂದಿನವರೆಗೂ ಪುನರ್ವಸತಿಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಅವೈಜಾÐನಿಕ ನಿಯಮಗಳಿಂದ ಪಿಇಎಂಎಸ್‍ಆರ್ ಕಾಯ್ದೆಯ ಪ್ರಕಾರ ಪುನರ್ವಸತಿ ಹೊಂದಲು ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಸಿದ್ದರಿದ್ದಾರೆ.
ಆದರೆ ಸರ್ಕಾರಗಳು ಇವರೆಗೂ ಸಮಗ್ರ ಪುನರ್ವಸತಿಗಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಉದಾಸೀನತೆಯಿಂದ 20 ಜನರು ಪ್ರಾಣ ಕಳೆದಕೊಂಡಿದ್ದಾರೆ. 40-60 ಸದಸ್ಯರು 60 ವರ್ಷಕ್ಕೆ ಮೇಲ್ಪಟ್ಟಿದ್ದಾರೆ. ಅವೈಜ್ಞಾನಿಕ ನಿಯಮಗಳ ಪ್ರಕಾರ ಸೌಲಭ್ಯಗಳ ವಂಚನೆಯಾಗಿದೆ ಎಂದು ಆರೋಪಿಸಿದರು.
ಈ ಕಾಯ್ದೆಯ ಕಾಲಂ 13 (2) ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳ ಪುನರ್ವಸತಿಯನ್ನು ಖಾತ್ರಿಪಡಿಸುವ ಜವಾಬ್ದಾರಿಯು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. 2013 ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಸೆಕ್ಷನ್ 19 ರ ಅಡಿಯಲ್ಲಿ ಅನುಷ್ಟಾನವನ್ನು ಖಚಿತ ಪಡಿಸಿಕೊಳ್ಳುವ ಜವಾಬ್ದಾರಿ ಮಾನ್ಯ ಜಿಲ್ಲಾಧಿಕಾರಿಗಳ ಮೇಲಿದೆ ಆದ್ದರಿಂದ ತಮ್ಮ ಅಧಿಕಾರವನ್ನು ಚಲಾಯಿಸಿ ಮೇಲಿನ ಉಲ್ಲಂಘನೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ಹಕ್ಕೊತ್ತಾಯಗಳು:
ಸೆಕ್ಷನ್ 13(1) ರ ಪ್ರಕಾರ ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಗಳ ಪರ್ಯಾಯ ಉದ್ಯೋಗಕ್ಕಾಗಿ ಹಾಗು ಸಹಾಯಧನ ರಿಯಾಯಿತಿ ಸಾಲವನ್ನು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಈ ಕೂಡಲೇ ನೀಡಬೇಕು, ಕಲಂ 13(ಸಿ) ಪ್ರಕಾರ ಸ್ವಂತ ನಿವೇಶನ ಅಥವ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ಈ ಕೂಡಲೇ ನೀಡಬೇಕು, ಕಲಂ 13(ಸಿ) ಪ್ರಕಾರ ಸರ್ಕಾರಿ ಯೋಜನೆಗಳಲ್ಲಿ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಗಳಿಗೆ ತಲಾ 2.00 ಎಕರೆ ಜಮೀನು ನೀಡಬೇಕು, ಕಲಂ 13(1ಬಿ) ಪ್ರಕಾರ ಅವಲಂಬಿತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗು ಉದ್ಯೋಗ ಈ ಕೂಡಲೇ ನೀಡಬೇಕು, 60 ವರ್ಷ ಮೆಲ್ಪಟ್ಟವರಿಗೆ ಮಾಸಿಕ 5000 ಪಿಂಚಣಿ ನೀಡಬೇಕು, ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಅನಾರೋಗ್ಯದ ಕಾರಣ ಮರಣ ಹೊಂದಿರುವ ಕುಟುಂಬಳಿಗೆ ಕಾನೂನು ಬದ್ದವಾಗಿ ನೆರವು ನೀಡಲೇಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕಿ ಎಂ.ಪದ್ಮ, ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಲಕ್ಷ್ಮೀಸಾಗರ ವೆಂಕಟರಾಮ್, ರಾಜ್ಯ ಮುಖಂಡ ಓಬಳೇಶ್, ಹನುಮಪ್ಪ, ಮಂಜುನಾಥ್, ಕೃಷ್ಣಯ್ಯ ಸೇರಿದಂತೆ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಉಪಸ್ಥಿತರಿದ್ದರು.