ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ದಂಧೆಯಲ್ಲಿ ಭಾಗಿಯಾಗಿರುವ ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು-ರೈತಸಂಘ

ಮುಳಬಾಗಿಲು; ಜೂ.2: ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ದಂಧೆಯಲ್ಲಿ ಭಾಗಿಯಾಗಿರುವ ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದಿಂದ ತಹಸೀಲ್ದಾರ್ ಮುಖಾಂತರ ಕಂದಾಯ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರಿ ಕೆರೆ ಜಮೀನಿಗೆ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿರುವ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಯಾರದೋ ಜಮೀನಿಗೆ ಇನ್ಯಾರೋ ಮಾಲೀಕನ ಟ್ರಾಕ್ಟರ್‍ಗೆ ನಕಲಿ ಬೋನಫೈಡ್ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿ ಅಕ್ರಮ ಆರ್‍ಡಿ ನಂಬರ್‍ಗಳನ್ನು ಸೃಷ್ಠಿ ಮಾಡುವ ಮುಖಾಂತರ ಸಾವಿರಾರು ಟ್ರಾಕ್ಟರ್ ಹಾಗೂ ಟ್ರಾಲಿಗಳನ್ನು ನೋಂದಣಿ ಮಾಡಿರುವ ಹಗರಣ ತೇಲಗಿ ಛಾಪಾ ಕಾಗದ ಹಗರಣವನ್ನು ಮೀರಿಸುವಂತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹದಗೆಟ್ಟಿರುವ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಎಲ್ಲಾ ನಾಡಕಚೇರಿಗಳಲ್ಲಿ ಉಪ ತಹಸೀಲ್ದಾರ್‍ಗಳಿಗೆ ಆರ್‍ಟಿಒ ಕಚೇರಿಗಳಲ್ಲಿನ ದಲ್ಲಾಳಿಗಳು ಟ್ರಾಕ್ಟರ್ ಶೋರೂಂ ಮಾಲೀಕರ ಜೊತೆ ಶಾಮೀಲಾಗಿ ವಾಣಿಜ್ಯ ಹಾಗೂ ಬೇರೆ ಬೇರೆ ಉದ್ದೇಶಕ್ಕಾಗಿ ಟ್ರಾಕ್ಟರ್ ಖರೀದಿ ಮಾಡುವ ಶ್ರೀಮಂತರಿಗೆ ಕೃಷಿ ಮಾಡುವ ರೈತರ ಜಮೀನಿನ ಪಹಣಿ ಮುಂತಾದ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೈಕಟ್ಟಿಕೊಂಡು ಪ್ರತಿ ಬೋನಫೈಡ್ ದಾಖಲೆಗೆ 10 ರಿಂದ 20 ಸಾವಿರ ಲಂಚ ನೀಡುವ ಮುಖಾಂತರ ಮೂಲ ಮಾಲೀಕರ ಹೆಸರಿನಲ್ಲಿರುವ ಜಮೀನಿಗೆ ಬೇರೆ ವ್ಯಕ್ತಿ ಹೆಸರಿಗೆ ಬೋನಫೈಡ್ ಪತ್ರ ಸೃಷ್ಠಿ ಮಾಡಿ ನೋಂದಣಿ ಮಾಡಿರುವ ದಂಧೆಗೆ ಮುಕ್ತಿ ಸಿಗಬೇಕಾದರೆ ಹಗರಣವನ್ನು ಸಿಬಿಐಗೆ ಒಪ್ಪಿಸಲೇ ಬೇಕಾಗಿದೆ ಎಂದು ಒತ್ತಾಯ ಮಾಡಿದರು.
ನಾಡಕಚೇರಿಯ ಉಪ ತಹಸೀಲ್ದಾರ್ ಕೈಯಲ್ಲಿ ಥಂಬ್ ಕೊಡುವ ಪೆನ್‍ಡ್ರೈವ್ ಇರುತ್ತದೆ. ಆದರೆ ಅಲ್ಲಿ ಹೊಟ್ಟೆಪಾಡಿಗಾಗಿ ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ಉಪತಹಸೀಲ್ದಾರ್ ನೀಡುತ್ತಾರೆಯೇ ? ಇದು ಸಾರ್ವಜನಿಕ ಬುದ್ಧಿವಂತರ ಪ್ರಶ್ನೆಯಾಗಿದೆ ಎಂದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಈ ದಂಧೆ ಪರಿಹಾರಕ್ಕಾಗಿ ರೈತರು ನೀಡಿರುವ ದಾಖಲೆಗಳ ದುರುಪಯೋಗ ಹಾಗೂ ಕೆರೆ, ಗೋಮಾಳ, ಗುಂಡುತೋಪು ಸರ್ಕಾರಿ ಆಸ್ತಿಗಳಿಗೆ ನಕಲಿ ರೈತರ ಹೆಸರನ್ನು ಸೃಷ್ಠಿ ಮಾಡಿ ಈ ಧಂಧೆ ನಡೆಯುತ್ತಿದೆ. ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ಕುಮ್ಮಕ್ಕಿಲ್ಲದೆ ಈ ದಂಧೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಆರ್‍ಟಿಒ ಕಚೇರಿ ಅಧಿಕಾರಿಗಳಿಗೆ ಮತ್ತು ದಲ್ಲಾಳರಿಗೆ ಚಿನ್ನದಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಹೆಜ್ಜೆಹೆಜ್ಜೆಗೂ ಜನಸಾಮಾನ್ಯರನ್ನು ಶೋಷಣೆ ಮಾಡುವ ಇಲಾಖೆಯಾಗಿದೆ. ಒಂದು ಕಡೆ ನಕಲಿ ಬೋನಫೈಡ್ ದಂಧೆಯಾದರೆ ಮತ್ತೊಂದೆಡೆ ಐಷಾರಾಮಿ ಹೊರರಾಜ್ಯದ ಕಾರುಗಳಿಗೆ ಮುಖಬೆಲೆಯನ್ನು ಕಡಿಮೆ ಮಾಡಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ನೋಂದಣಿ ಮಾಡುವ ದೊಡ್ಡ ನಕಲಿ ಜಾಲವೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ದೂರಿದರು.
ಅಲ್ಲಿನ ಅಧಿಕಾರಿಗಳ ಮಾಹಿತಿ ಪ್ರಕಾರ ನಾಡಕಚೇರಿಗಳಲ್ಲಿ ಸೃಷ್ಠಿಯಾಗುವ ಬೋನಫೈಡ್ ಸಾವಿರ ಆದರೆ ಅದೇ ಆರ್‍ಡಿ ನಂಬರುಗಳನ್ನು ನಕಲು ಮಾಡಿ 6 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್‍ಗಳನ್ನು ಅಧಿಕಾರಿಗಳು ತಿರುಚಿ ನೋಂದಣಿ ಮಾಡಿರುವ ಜೊತೆಗೆ 500ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿಗೂ ಇದೇ ರೀತಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟಿಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಹೊರಗುತ್ತಿಗೆದಾರರ ಮೇಲೆ ಗೂಬೆ ಕೂರಿಸುವ ಅಧಿಕಾರಿಗಳ ಜಾಣ ನಡೆಗೆ ಸಾರ್ವಜನಿಕರು ದಂಗಾಗಿದ್ದಾರೆ.
ಹಾಗಾಗಿ ಮಾನ್ಯ ಕಂದಾಯ ಮಂತ್ರಿಗಳಾದ ಕೃಷ್ಣಬೈರೇಗೌಡರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಬೋನಫೈಡ್ ಮುಖಾಂತರ ಟ್ರಾಕ್ಟರ್, ಟ್ರಾಲಿಯನ್ನು ನೋಂದಣಿ ಮಾಡಿರುವ ದಂಧೆಯನ್ನು ಸಿಬಿಐಗೆ ಒಪ್ಪಿಸಿ ಭಾಗಿಯಾಗಿರುವ ಕಂದಾಯ, ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅಮಾಯಕರನ್ನು ಉಳಿಸಿ ದಂಧೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರವಿಕುಮಾರ್, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಸಚಿವರಿಗೆ ಕಳುಹಿಸಿಕೊಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‍ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಬಂಗಾರಿ ಮಂಜು, ಸುನೀಲ್‍ಕುಮಾರ್, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ವಿಶ್ವ, ವಿಜಯ್‍ಪಾಲ್ ಮುಂತಾದವರಿದ್ದರು.