ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ಧಾಳಿಯನ್ನು ಖಂಡಿಸಿ ಜೂನ್ 6 ರಂದು ಮಂಗಳೂರಿನಲ್ಲಿ ಸಾಮೂಹಿಕ ಧರಣಿ

(ಚಿತ್ರ ಎರವಲು)

ಮಣಿಪುರ ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆದ ವ್ಯಾಪಕ ಧಾಳಿಯನ್ನು ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ತಾ.06-06-2023ರಂದು ಮಂಗಳವಾರ ಸಂಜೆ 4.30ಕ್ಕೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸಾಮೂಹಿಕ ಧರಣಿ ನಡೆಯಲಿದೆ ಎಂದು 3 ಸಂಘಟನೆಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮಣಿಪುರದಲ್ಲಿ ಬಹುಸಂಖ್ಯಾತರಾಗಿರುವ ಬುಡಕಟ್ಟು ಸಮುದಾಯದ ಮಧ್ಯೆ ಸೌಹಾರ್ದ ವಾತಾವರಣವನ್ನು ಸಾಧಿಸುವ ಬದಲು ಅಲ್ಲಿನ ಬಿಜೆಪಿ ರಾಜ್ಯ ಸರಕಾರವು ದ್ವೇಷ ರಾಜಕಾರಣವನ್ನು ನಡೆಸುತ್ತಿದೆ. ಮೈತೈ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಭುಗಿಲೆದ್ದ ಗಲಭೆಯನ್ನು ಮುಂದಿಟ್ಟು ಕುಕಿ ಸಮುದಾಯದ ಕ್ರಿಶ್ಚಿಯನ್ನರ ಹಾಗೂ ಅವರ ಚರ್ಚ್ ಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸಿ ನೂರಾರು ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿದ್ದು, 50,000ಕ್ಕೂ ಮಿಕ್ಕಿ ಜನತೆ ಸಂತ್ರಸ್ತರಾಗಿದ್ದಾರೆ. ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿ ಹಾನಿಯಾಗಿದೆ.9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಾಗಿದ್ದು,ದೂರಸಂಪರ್ಕ,ಇಂಟರ್ ನೆಟ್ ಸೇರಿದಂತೆ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.ದೇಶದ ಒಂದು ಪುಟ್ಟ ರಾಜ್ಯದಲ್ಲಿ ಇಂತಹ ಗಂಭೀರ ಸಮಸ್ಯೆ ತಲೆದೋರಿದರೂ ದೇಶವನ್ನಾಳುವ ಕೇಂದ್ರ ಸರಕಾರವು ಮಾತ್ರ ದಿವ್ಯ ಮೌನ ವಹಿಸಿದೆ ಎಂದು ಮೂರೂ ಸಂಘಟನೆಗಳು ಆಪಾದಿಸಿದೆ

ಮಣಿಪುರ ರಾಜ್ಯದಲ್ಲಿ ಗಲಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ,ಮತ್ತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ತಾ.06-06-2023ರಂದು ಸಂಜೆ 4.30ಕ್ಕೆ ಮಂಗಳೂರಿನಲ್ಲಿ ಜರುಗಲಿರುವ ಸಾಮೂಹಿಕ ಧರಣಿಯಲ್ಲಿ ಜಿಲ್ಲೆಯ ನ್ಯಾಯಪ್ರಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಘಟಕರಾದ ರೊಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್, ಆಲ್ಫ್ರೆಡ್ ಮನೋಹರ್, ಸ್ಟ್ಯಾನಿ ಲೋಬೋ, ಕೆ ಅಶ್ರಫ್, ಮಂಜುಳಾ ನಾಯಕ್ ರವರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ

ವಂದನೆಗಳೊಂದಿಗೆ

ಸುನಿಲ್ ಕುಮಾರ್ ಬಜಾಲ್
ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಮಂಗಳೂರು