ಕೋಲಾರ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯ ಅಬ್ಬರಕ್ಕೆ ಕೋಲಾರ ಜಿಲ್ಲೆಯ ಅಂದಾಜು 3000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದ್ದು , ರೈತರು ಕಂಗಾಲಾಗಿದ್ದಾರೆ .
ಅಕಾಲಿಕ ಮಳೆಗೆ ರಾಜ್ಯದಲ್ಲೇ ಅತೀ ಹೆಚ್ಚು ಬೆಳೆ ನಷ್ಟ ಕೋಲಾರ ಜಿಲ್ಲೆಯಲ್ಲಾಗಿದ್ದು , ಅಂದಾಜು 3000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದ್ದು , ಆಸ್ತಿ ಪಾಸ್ತಿ , ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮೇ 23 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಬೆಳೆ ಹಾನಿ ಪ್ರದೇಶಕ್ಕೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು .
ಅದರಂತೆ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ದ್ವಾರಸಂದ್ರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಹಾನಿಗೊಳಗಾದ ತೋಟಗಾರಿಕಾ ಬೆಳೆಗಳಾದ ಮಾವು , ಪರಂಗಿ ಹಾಗೂ ಹೂ ಕೋಸು ತೋಟಗಳಲ್ಲಿ ಪರಿಶೀಲನೆ ನಡೆಸಿದರು .
ಈ ಗ್ರಾಮಗಳಲ್ಲಿ ಶೇಕಡ 33 ಕ್ಕಿಂತಲೂ ಹೆಚ್ಚು ಮಾವಿನ ಫಸಲು ನೆಲ ಕಚ್ಚಿದ್ದು , ಜಿಲ್ಲಾಧಿಕಾರಿಗಳಾದ ವೆಂಕಟರಾಜಾ , ತೋಟಗಾರಿಕಾ ಉಪ ನಿರ್ದೇಶಕರಾದ ಕುಮಾರಸ್ವಾಮಿ , ಹಿರಿಯ ಸಹಾಯಕ ನಿರ್ದೇಶಕರಾದ ಎಂ. ಶ್ರೀನಿವಾಸನ್ , ಹಾಗೂ ಸಂಬಂಧಿತ ರೆವಿನ್ಯೂ ಇನ್ಸ್ಪೆಕ್ಟರ್ , ಗ್ರಾಮ ಲೆಕ್ಕಾಧಿಕಾರಿಗಳು ಖುದ್ದು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು .
ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಂಟಿ ಸಮೀಕ್ಷೆ ನಡೆಸಿ ಒಂದು ವಾರದೊಳಗೆ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು .