ಶನಿವಾರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿಯೂ ಕೋಲಾರ ಜಿಲ್ಲೆಯ ಯಾವುದೇ ಶಾಸಕ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿಲ್ಲ .
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿಗೆದ್ದ ಕೆ.ಎಚ್. ಮುನಿಯಪ್ಪ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದೇ ಸದ್ಯ ಕೋಲಾರ ಜಿಲ್ಲೆಯ ಜನರ ಸಮಾಧಾನಕ್ಕೆ ಕಾರಣವಾಗಿದ್ದು , ಇವರೇ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಸಂತಸಕ್ಕೆ ಕಾರಣವಾಗಿದೆ .
ಕೋಲಾರ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿ ದಿವಂಗತ ಸಿ.ಬೈರೇಗೌಡ , ಆಲಂಗೂರ್ ಶ್ರೀನಿವಾಸ್ , ವಿ. ಮುನಿಯಪ್ಪ ಇತರರು ಜಿಲ್ಲಾ ಆಡಳಿತದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿಹೋಗಿದ್ದಾರೆ .
ಆನಂತರದ ದಿನಗಳಲ್ಲಿ ಆರ್. ವರ್ತೂರು ಪ್ರಕಾಶ್ , ಆಲಂಗೂರ್ ಶ್ರೀನಿವಾಸ್ , ಎಚ್. ನಾಗೇಶ್ ಮತ್ತು ಕೆ . ಆರ್ ರಮೇಶ್ ಕುಮಾರ್ ತಮ್ಮದೇ ರೀತಿಯಲ್ಲಿ ಆಡಳಿತ ನಡೆಸಿ ಗಮನ ಸೆಳೆದಿದ್ದಾರೆ . ಆದರೆ , ಇತ್ತೀಚಿನ ವರ್ಷಗಳಲ್ಲಿ ಕೋಲಾರ ಜಿಲ್ಲೆಯ ಶಾಸಕರಿಗೆ ಮಂತ್ರಿ ಭಾಗ್ಯ ಸಿಗದ ಕಾರಣದಿಂದಾಗಿ ಯಾವುದೇ ರಾಜಕಾರಣಿ ಸಮರ್ಥವಾಗಿ ಉಸ್ತುವಾರಿ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ .
ಹಿಂದಿನ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕೋಲಾರದಿಂದ ಜೆಡಿಎಸ್ ಶಾಸಕರಾಗಿ ಕೆ. ಶ್ರೀನಿವಾಸಗೌಡ ಗೆದ್ದಿದ್ದರೂ , ಅವರಿಗೆ ಮಂತ್ರಿಯಾಗುವ ಭಾಗ್ಯ ಒದಗಿಬರಲಿಲ್ಲ . ಇದರಿಂದ ಉಸ್ತುವಾರಿ ಹೊಣೆಯೂ ಕೈಗೆಟುಕಲಿಲ್ಲ . ಆನಂತರದ ಬಿಜೆಪಿ ಸರಕಾರದಲ್ಲಿ ಸುಮಾರು ದಿನಗಳ ಕಾಲ ಕೋಲಾರ ಜಿಲ್ಲೆಗೆ ಮಂತ್ರಿಯನ್ನೇ ನೇಮಕ ಮಾಡಿರಲಿಲ್ಲ .
ಕೇವಲ ಆಗಸ್ಟ್ 15 ಮತ್ತು ಜನವರಿ 26 ರಂದು ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜಾರೋಹಣಕ್ಕೆ ಮಾತ್ರವೇ ಮಂತ್ರಿಗಳನ್ನು ನೇಮಕ ಮಾಡಲಾಗುತ್ತಿತ್ತು .
ಕಾಂಗ್ರೆಸ್ ಪಕ್ಷದಿಂದ ಶಾಸಕರು ಬಿಜೆಪಿ ಸೇರಿ ಉಪಚುನಾವಣೆ ಗೆದ್ದು ಬಂದ ನಂತರತವಷ್ಟೇ ಒಪ್ಪದಿದ್ದರೂ ತೋಟಗಾರಿಕೆ ಸಚಿವ ಮುನಿರತ್ನರನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು . ಆದರೆ , ಮುನಿರತ್ನ ಕೇವಲ ಪಕ್ಷದ ಸಭೆಗಳಿಗೆ ಹಾಗೂ ಸರಕಾರಿ ದೊಡ್ಡ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದರಾದರೂ , ಕೋಲಾರ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಸಮಗ್ರವಾಗಿ ಚಿಂತನೆ ನಡೆಸುವ ಗೋಜಿಗೆ ಹೋಗಲೇ ಇಲ್ಲ . ಒಂದೆಡೆರು ಕೆಡಿಪಿ ಸಭೆಗಳನ್ನು ನಡೆಸಿ ಸುಮ್ಮನಾಗಿದ್ದರು .
2023 ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಿಂದ ನಾಲ್ವರು ಶಾಸಕರು ಗೆದ್ದಿದ್ದಾರೆ . ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತವೂ ಬಂದಿತ್ತು . ಇದರಿಂದ ಗೆದ್ದ ನಾಲ್ವರಲ್ಲಿ ಒಬ್ಬರಿಗಾದರೂ ಮಂತ್ರಿಗಿರಿ ಸಿಗುತ್ತದೆಯೆಂಬ ನಿರೀಕ್ಷೆ ಕೋಲಾರ ಜಿಲ್ಲೆಯವರದ್ದಾಗಿತ್ತು . ಅದರಲ್ಲೂ ಬಂಗಾರಪೇಟೆಯ ಎಸ್.ಎ ನ್. ನಾರಾಯಣಸ್ವಾಮಿ ಮೂರು ಬಾರಿ ಗೆದ್ದಿದ್ದರಿಂದ ಮಂತ್ರಿಯಾಗಲು ಪ್ರಯತ್ನಿಸಿದ್ದರು .
ಮಾಲೂರಿನ ಕೆ.ವೈ. ನಂಜೇಗೌಡ , ಕೋಲಾರದ ಕೊತ್ತೂರು ಮಂಜುನಾಥ್ ತಮ್ಮ ವಾದ ಮಂಡಿಸಿ ಮಂತ್ರಿಗಿರಿಗಾಗಿ ಧ್ವನಿ ಎತ್ತಿದ್ದರು . ಕೆಜಿಎಫ್ ಶಾಸಕಿ ರೂಪಕಲಾರಿಗೆ ಮಂತ್ರಿಯಾಗುವ ಭಾಗ್ಯ ಸ್ವಲ್ಪದರಲ್ಲಿ ಕೈತಪ್ಪುವಂತಾಯಿತು . ಮಹಿಳಾ ಹಾಗೂ ದಲಿತ ಎಡಗೈ ಕೋಟಾದಲ್ಲಿ ರೂಪಕಲಾ ಮಂತ್ರಿಯಾಗಿಬಿಡ ುತ್ತಿದ್ದರು . ಆದರೆ , ದೇವನಹಳ್ಳಿಯಲ್ಲಿ ಗೆದ್ದಿದ್ದ ಅವರ ತಂದೆ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರಿಂದ ರೂಪಕಲಾ ಮಂತ್ರಿಗಿರಿಯಿಂದ ವಂಚಿತರಾಗಬೇಕಾಯಿತು .
ಸಿದ್ದರಾಮಯ್ಯರ ಹಿಂದಿನ ಸರಕಾರದಲ್ಲಿ ಮಂತ್ರಿಯಾಗಿದ್ದ ಶ್ರೀನಿವಾಸಪುರದ ಕೆ ಆರ್ ರಮೇಶ್ ಕುಮಾರ್ ಈ ಬಾರಿ ಗೆದ್ದಿದ್ದರೆ ಮಂತ್ರಿಯಾಗರವ ಸ್ಥಾನದಲ್ಲಿರುತ್ತಿದ್ದರು . ಆದರೆ , ಪರಾಭವ ಗೊಂಡಿದ್ದರಿಂದ ಅವಕಾಶ ವಂಚಿತರಾದರು .
ಕೋಲಾರ ಜಿಲ್ಲೆಯ ಎಲ್ಲಾ ನಾಲ್ವರು ಶಾಸಕರು ಒಗ್ಗಟ್ಟಿನಿಂದ ಪ್ರಯತ್ನಿಸಿದ್ದರೆ ಮಂತ್ರಿಯಾಗುವ ಭಾಗ್ಯ ಒಬ್ಬರಿಗಾದರೂ ಸಿಗುತ್ತಿತ್ತು . ಆದರೆ , ತಾವೇ ಮಂತ್ರಿಯಾಗಬೇಕೆಂಬ ಭರದಲ್ಲಿ ವೈಯಕ್ತಿಕವಾಗಿ ಪ್ರಯತ್ನಿಸಿದ ಕೋಲಾರದ ಶಾಸಕರು ಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ .
ಹಿಂದಿನ ಸರಕಾರಗಳಲ್ಲಿ ಕೋಲಾರ ಜಿಲ್ಲೆಗೆ ಹಲವಾರು ತಿಂಗಳುಗಳ ಕಾಲ ಉಸ್ತುವಾರಿ ಮಂತ್ರಿಯನ್ನು ನೇಮಕ ಮಾಡಿರಲಿಲ್ಲ . ಕೇವಲ ಧ್ವಜಾರೋಹಣ ಜವಾಬ್ದಾರಿಯನ್ನು ಮಾತ್ರವೇ ಕೆಲವು ಸಚಿವರಿಗೆ ಒಪ್ಪಿಸಲಾಗುತ್ತಿತ್ತು .
ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ , ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಸರಕಾರವು ಕೋಲಾರ ಕುರಿತಂತೆ ಇಂತದ್ದೇ ನಿರ್ಲಕ್ಷ್ಯವನ್ನು ಹೊಂದಿ ಉಸ್ತುವಾರಿ ಸಚಿವರ ನೇಮಕ ಮಾಡುವುದನ್ನು ಮರೆತಿತ್ತು .
ಕೋಲಾರ ಜಿಲ್ಲೆಯಿಂದ ಉಸ್ತುವಾರಿ ಮಂತ್ರಿಗಾಗಿ ಬೇಡಿಕೆ ಹೆಚ್ಚಿದಾಗ ಮುನಿರತ್ನರನ್ನು ಕಾಡಿಬೇಡಿ ಒಪ್ಪಿಸಲಾಗಿತ್ತು .
ಇದೀಗ ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಎಂಟು ಮಂದಿ ಶಾಸಕರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ .
ಈ ಎಂಟು ಮಂದಿಯಲ್ಲಿ ಕೋಲಾರದಿಂದ ಗೆದ್ದವರು ಯಾರೂ ಇಲ್ಲ . ಮುಂದಿನ ಸಂಪುಟ ವಿಸ್ತರಣೆಯಲ್ಲಿಯೂ ಕೋಲಾರ ಜಿಲ್ಲೆಯ ಯಾರಾದರೂ ಇರುತ್ತಾರೆಂಬ ನಂಬಿಕೆ ಇಲ್ಲವಾಗಿದೆ . ಏಕೆಂದರೆ , ಕೋಲಾರ ಜಿಲ್ಲೆಯ ಶಾಸಕರಿಗಿಂತಲೂ ಪ್ರಭಾವಿ ಶಾಸಕರು ಮಂತ್ರಿಗಿರಿಗಾಗಿ ಪ್ರಯತ್ನಿಸುತ್ತಿದ್ದಾರೆ .
ಕೋಲಾರ ಉಸ್ತುವಾರಿ ಕೆ.ಎಚ್.ಮುನಿಯಪ್ಪ .. ?
ಸದ್ಯಕ್ಕೆ ಕೋಲಾರ ಜಿಲ್ಲೆಯ ಆಶಾಕಿರಣ ಎಂದರೆ ದೇವನಹಳ್ಳಿಯಲ್ಲಿ ಗೆದ್ದು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕೆ.ಎಚ್. ಮುನಿಯಪ್ಪ ಮಾತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗೆದ್ದರೂ ಕೆ.ಎಚ್. ಮುನಿಯಪ್ಪ ಕೋಲಾರ ಉಸ್ತುವಾರಿ ಹೊಣೆಗಾರಿಯನ್ನು ಹೊತ್ತುಕೊಳ್ಳುತ್ತಾರೆಂಬ ವಿಶ್ವಾಸ ಅವರ ಬೆಂಬಲಿಗರಲ್ಲಿದೆ .
ಇದು ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೆ.ಎಚ್ . ಮುನಿಯಪ್ಪರನ್ನು ವಿರೋಧಿಸುವ ಒಂದು ಗುಂಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ . ಮತ್ತೊಂದೆಡೆ ಕೋಲಾರ ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಸಿಗಬೇಕು , ಅವರೇ ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕೆಂಬ ಬೇಡಿಕೆ ರೈತ ಸಂಘ ಸೇರಿದಂತೆ ರಾಜಕೀಯ ವಲಯದಲ್ಲಿಯೂ ಕೇಳಿ ಬರುತ್ತಿದೆ .
ಹಿಂದಿನ ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರಗಳಲ್ಲಿ ಕೋಲಾರ ಜಿಲ್ಲೆಗೆ ಉಸ್ತುವಾರಿ ಹೊಣೆ ನೀಡದೆ ನಿರ್ಲಕ್ಷಿಸಿದಂತೆ ಕಾಂಗ್ರೆಸ್ ಹೊಸ ಸರಕಾರದಲ್ಲಿ ಆಗದಿರಲಿ ಎಂಬುದು ಕೋಲಾರ ಜಿಲ್ಲೆಯ ಜನತೆಯ ಆಶಯವಾಗಿದೆ . ಕೋಲಾರ ರಾಜಕಾರಣವನ್ನು ಚೆನ್ನಾಗಿಯೇ ಅರಿತಿರುವ ಮುಖ್ಯಮಂತ್ರಿ ಸಿದ್ದರಾವಯ್ಯ , ಕೋಲಾರದಯಾವ ಶಾಸಕರನ್ನು ತಮ್ಮ ಮಂತ್ರಿ ಮಂಡಲದಲ್ಲಿ ಸೇರಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಲ್ಲಿಯವರೆವಿಗೂ ಇದ್ದೇ ಇರುತ್ತದೆ