ತಾಲ್ಲೂಕಿನಲ್ಲಿ ಹಾದುಹೋಗುವ ರೈಲು ರಸ್ತೆ ಕೆಳಗೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಅಂಡರ್ ಪಾಸ್‍ಗಳಿಂದಾಗಿ ಮಳೆಗಾಲದಲ್ಲಿ ನಾಗರಿಕ ಸಂಚಾರಕ್ಕೆ ತೊಂದರೆ : ಜೆಡಿಎಸ್ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಹಾದುಹೋಗುವ ರೈಲು ರಸ್ತೆ ಕೆಳಗೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಅಂಡರ್ ಪಾಸ್‍ಗಳಿಂದಾಗಿ ಮಳೆಗಾಲದಲ್ಲಿ ನಾಗರಿಕ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಜೆಡಿಎಸ್ ವಿಜೇತ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ದೊಡಮಲದೊಡ್ಡಿ ಗ್ರಾಮದ ಸಮೀಪ ಹಾಳಾಗಿರುವ ರೈಲ್ವೆ ಅಂಡರ್ ಪಾಸ್‍ಗೆ ಶುಕ್ರವಾರ ರೈಲ್ವೆ ಎಂಜಿನಿಯರ್‍ಗಳೊಂದಿಗೆ ಭೇಟಿಯಾಗಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ನಾಗರಿಕರಿಗೆ ಅನುಕೂಲವಾಗಲೆಂದು ರೈಲ್ವೆ ಅಂಡರ್ ಪಾಸ್ ನಿರ್ಮಿಸಲಾಗಿದೆ. ಆದರೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ. ಆರೇಳು ಅಡಿ ನೀರು ನಿಲ್ಲುತ್ತದೆ. ಅಂಥ ಸಂದರ್ಭದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಗ್ರಾಮೀಣ ಪ್ರದೇಶದ ಜನರು ಹತ್ತಾರು ಕಿ.ಮೀ ಬಳಸಿಕೊಂಡು ಗ್ರಾಮ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಪಂಪ್‍ಸೆಟ್ ನೆರವಿನಿಂದ ಅಂಡರ್ ಪಾಸ್ ಕೆಳಗಿನ ನೀರು ಹೊರಹಾಕುವ ಯೋಜನೆ ಜಾರಿಗೆ ತರಲಾಗಿದೆ. ಆದರೆ ಅದು ಸುಲಭದ ಕೆಲಸವಾಗಿಲ್ಲ. ಎಲ್ಲ ಅಂಡರ್ ಪಾಸ್‍ಗಳಲ್ಲೂ ನೀರು ತುಂಬಿಕೊಂಡರೆ, ತ್ವರಿತಗತಿಯಲ್ಲಿ ಕೆಲಸ ನಡೆಯುವುದಿಲ್ಲ. ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸಲು ರೈಲ್ವೆ ಇಲಾಖೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪೂಲ ಶಿವಾರೆಡ್ಡಿ, ವೇಣುಗೋಪಾಲ್, ಮಂಜುನಾಥರೆಡ್ಡಿ ಇದ್ದರು.