ಮೇ 20,21 ಕೋಲಾರ ಜಿಲ್ಲೆಯ 15 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ : 6384 ವಿದ್ಯಾರ್ಥಿಗಳ ನೋಂದಣಿ-ಸುಗಮ ಪರೀಕ್ಷೆಗೆ ಕ್ರಮ-ಡಿಸಿ ವೆಂಕಟ್‍ರಾಜಾ

ಕೋಲಾರ:- ಜಿಲ್ಲೆಯ 15 ಕೇಂದ್ರಗಳಲ್ಲಿ ಮೇ.20 ಹಾಗೂ 21 ರಂದು ಎರಡು ದಿನಗಳ ಕಾಲ ನಡೆಯುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ 6384 ವಿದ್ಯಾರ್ಥಿಗಳು ನೋದಾಯಿಸಿದ್ದು, ಯಾವುದೇ ಗೊಂದಲಕ್ಕೆಡೆಯಿಲ್ಲದಂತೆ ಅಗತ್ಯಕ್ರಮವಹಿಸುವಂತೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚಿಸಿದರು.
ತಮ್ಮ ಕಚೇರಿಯಲ್ಲಿ ನಡೆದ ಸಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಲಾರ ನಗರದ 13 ಹಾಗೂ ಕೆಜಿಎಫ್ ನಗರದ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಅಗತ್ಯ ಸಿದ್ದತೆಗಳನ್ನು ನಡೆಸಲಾಗಿದ ಎಂದು ತಿಳಿಸಿದರು.
ಪರೀಕ್ಷಾ ಕೊಠಡಿಗಳಲ್ಲಿ ಉತ್ತಮ ಗಾಳಿ,ಬೆಳಕು ಇರುವಂತೆ ನೋಡಿಕೊಳ್ಳಿ, ಶುದ್ದ ಕುಡಿಯುವ ನೀರು, ಶೌಚಾಲಯ ಸ್ವಚ್ಚತೆಗೆ ಗಮನ ನೀಡಲು ಸೂಚಿಸಿ, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿ ಒಂದು ಪೆನ್ ಡ್ರೈನಲ್ಲಿ ಸ್ಟೋರ್ ಮಾಡಿ ಸೂಕ್ತ ಓಚರ್ ಗಳೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ, ಪರೀಕ್ಷಾ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಗುರುತಿನ ಚೀಟಿಗಳನ್ನು ಹೊಂದಿರಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರಗಳ ಮಾರ್ಗಾಧಿಕಾರಿಗಳು ಪರೀಕ್ಷಾ ದಿನಗಳಂದು ಖಜಾನೆಯಿಂದ ಸೀಲ್ ಮಾಡಲ್ಪಟ್ಟಿರುವ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟುಗಳ ಬಂಡಲ್ ಗಳನ್ನು ನಿಗಧಿತ ಸಮಯಕ್ಕೆ ಸರಿಯಾಗಿ ತ್ರಿಸದಸ್ಯ ಸಮಿತಿಯ ಅಧಿಕಾರಿಗಳಿಂದ ಪಡೆದು ನಿಯಮಾನುಸಾರ ಪರೀಕ್ಷಾ ಕೇಂದ್ರಗಳಿಗೆ ಪೋಲಿಸ್ ರಕ್ಷಣೆಯಲ್ಲಿ ಬೆಳಿಗ್ಗೆ 10.00 ಗಂಟೆಗೆ ಮುನ್ನ ಹಾಗೂ ಮದ್ಯಾಹ್ನ 2.00 ಗಂಟೆಗೆ ಮುನ್ನ ತಲುಪಿಸುವುದು ಹಾಗೂ ಪರೀಕ್ಷಾ ಅವಧಿ ಮುಗಿದ ನಂತರ ಓಎಂಆರ್ ಶೀಟುಗಳ ಬಂಡಲ್ ಗಳನ್ನು ವಾಪಾಸ್ ಖಜಾನೆಗೆ ತಲುಪಿಸಬೇಕು ಎಂದರು.
ಕೇಂದ್ರಗಳ ಸುತ್ತ
ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡುವ ಬಗ್ಗೆ ಹಾಗೂ ಪರೀಕ್ಷಾ ಕೇಂದ್ರದಿಂದ 200 ಅಡಿಗಳ ಅಂತರದೊಳಗಿರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವ ಬಗ್ಗೆ ಕ್ರಮವಹಿಸಲಾಗಿದೆ ಎಂದು ಡಿಸಿಯವರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೋಲೀಸ್ ರಕ್ಷಣೆ ನೀಡುವ ಬಗ್ಗೆ ಸಂಬಂಧಿಸಿದ ಪರೀಕಾ ಕೇಂದ್ರಗಳ ಉಪ ಮುಖ್ಯ ಅಧೀಕ್ಷಕರುಗಳು ಆಯಾ ಕೇಂದ್ರಗಳಿಗೆ ಸಂಬಂಧಿಸಿದ ಪೋಲೀಸ್ ಠಾಣೆಗಳಲ್ಲಿ ರಕ್ಷಣೆ ಕೋರುವುದು ಹಾಗೂ ಠಾಣೆಯ / ಅಧಿಕಾರಿಯ ದೂರವಾಣಿ/ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಎಂದರು.
ಸುಗಮ ಪರೀಕ್ಷೆಗೆ
ಜಾಗೃತದಳ ನೇಮಕ
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಸಭೆಗೆ ಮಾಹಿತಿ ನೀಡಿ, ಸುಗಮ ಪರೀಕ್ಷೆ ಹಾಗೂ ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ, ಪ್ರತಿಕೇಂದ್ರಕ್ಕೂ ಕೇಂದ್ರ ಕಚೇರಿಯ ಜಾಗೃತದಳ, ಜಿಲ್ಲಾಧಿಕಾರಿಗಳ ನೇತೃತ್ವದ ಒಂದು ಜಾಗೃತದಳ, ತಮ್ಮ ನೇತೃತ್ವದ ಒಂದು ಜಾಗೃತದಳ, ಹಾಗೂ ಪರೀಕ್ಷಾ ಕೇಂದ್ರವಾರು ದ್ವಿಸದಸ್ಯ ಜಾಗೃತದಳಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಯಾವುದೇ ರೀತಿಯ ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವಂತಿಲ್ಲ. ಪರೀಕ್ಷೆಗೆ ಸಂಬಂಧಪಡದ ಯಾವುದೇ ವ್ಯಕ್ತಿಗಳಾಗಲಿ, ಆಡಳಿತ ಮಂಡಳಿಯವರಾಗಲಿ ಕೇಂದ್ರದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಕ್ಯಾಲುಕುಲೇಟರ್ಸ್, ಸ್ಲೇಡ್‍ರೂಲ್ಸ್, ಲಾಗ್ ಟೇಬಲ್ಸ್, ಮಾರ್ಕರ್ಸ್ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಕೊಠಡಿ ಮೇಲ್ಚಿಚಾರಕರು ಮೊಬೈಲ್ ತರಬಾರದು ಎಂದು ತಿಳಿಸಿದ ಅವರು, ಪರೀಕ್ಷಾ ಕೇಂದ್ರದ ಕೊಠಡಿಯೊಳಗೆ ಫೋಟೋಗ್ರಾಫರ್, ವಿಡೀಯೋಗ್ರಾಫರ್, ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆ
ಕೇಂದ್ರಗಳ ವಿವರ
ಕೋಲಾರ ನಗರದ ಅಲ್‍ಅಮೀನ್ ಪಿಯು ಕಾಲೇಜಿನಲ್ಲಿ 408 ವಿದ್ಯಾರ್ಥಿಗಳು, ಗೋಕುಲ ಸ್ವತಂತ್ರ್ಯ ಪಿಯು ಕಾಲೇಜಿನಲ್ಲಿ 480, ಮಹಿಳಾ ಸಮಾಜ ಪಿಯು ಕಾಲೇಜಿನ ಕೇಂದ್ರದಲ್ಲಿ 614, ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 552, ನೂತನ ಪದವಿ ಪೂರ್ವ
ಕಾಲೇಜು ಕೇಂದ್ರದಲ್ಲಿ 336, ಆದರ್ಶ ಪಿಯು ಕಾಲೇಜಿನಲ್ಲಿ 240 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.
ಸಹ್ಯಾದ್ರಿ ಪಿಯು ಕಾಲೇಜು ಕೇಂದ್ರದಲ್ಲಿ 528, ಎಸ್‍ಡಿಸಿ ಪಿಯು ಕಾಲೇಜಿನಲ್ಲಿ 336, ಎನ್.ಎಂ.ಜೆ ಪಿಯು ಕಾಲೇಜಿನಲ್ಲಿ 384, ಎಸ್‍ಎಫ್‍ಎಸ್ ಪಿಯು ಕಾಲೇಜಿನಲ್ಲಿ 528 ಮಂದಿ, ಎಕ್ಸಲೆಂಟ್ ಪಿಯು ಕಾಲೇಜು ಕೇಂದ್ರದಲ್ಲಿ 288, ಬಸವಶ್ರೀ ಪಿಯು ಕಾಲೇಜಿನಲ್ಲಿ 312, ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ 552 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.
ಉಳಿದಂತೆ ಕೆಜಿಎಫ್‍ನಲ್ಲಿ ಎರಡು ಕ್ಷೇತ್ರಗಳಿದ್ದು, ಅಲ್ಲಿನ ಉರಿಗಾಂ ಸರ್ಕಾರಿ ಪಿಯು ಕಾಲೇಜಿನಲ್ಲಿ 547 ಹಾಗೂ ಬಾಲಕಿಯರ ಸರ್ಕಾರಿ ಪಿಯುಕಾಲೇಜಿನ ಕೇಂದ್ರದಲ್ಲಿ 240 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಮಾರ್ಗಾಧಿಕಾರಿಗಳು ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಟಿ.ಜಯರಾಂ, ಎಂ.ಬಾಲಕೃಷ್ಣ, ಪರುಶುರಾಂ ಉಲ್ಕಿ, ನರಸಿಂಹಮೂರ್ತಿ, ಕೆಜಿಎಫ್‍ನಕೇಶವ ಮೂರ್ತಿ, ಮುನಿರತ್ನಂ ಉಪಸ್ಥಿತರಿದ್ದರು.