ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಲು ಪೂರಕವಾಗಿ ಪೈಪ್ ಅಳವಡಿಸಲು ಅಗೆಯಲಾಗಿರುವ ರಸ್ತೆಗಳನ್ನು ಮೇ.30 ರೊಳಗೆ ದುರಸ್ತಿ ಮಾಡಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಲು ಪೂರಕವಾಗಿ ಪೈಪ್ ಅಳವಡಿಸಲು ಅಗೆಯಲಾಗಿರುವ ರಸ್ತೆಗಳನ್ನು ಮೇ.30 ರೊಳಗೆ ದುರಸ್ತಿ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಹೊಗಳಗೆರೆ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಸಿ ವ್ಯಾಲಿ ನೀರು ಹರಿಸಲು ಪೈಪ್ ಅಳವಡಿಸಲು ರಸ್ತೆಗಳನ್ನು ಅಗೆಯಲಾಗಿದೆ. ಅದರಿಂದ ಸಂಚಾರ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಪೈಪ್ ಲೈನ್ ಗುತ್ತಿಗೆ ಪಡೆದಿರುವ ವ್ಯಕ್ತಿಗಳು ನಿಗದಿತ ಸಮಯದೊಳಗೆ ದುರಸ್ತಿ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರ ಜಮೀನುಗಳ ಪಕ್ಕದಲ್ಲಿ ಪೈಪ್ ಅಳವಡಿಸಲು ಹೇಗೆಂದರೆ ಹಾಗೆ ನೆಲ ಅಗೆಯಲಾಗಿದೆ. ಸಮರ್ಪಕವಾಗಿ ಮುಚ್ಚದ ಪರಿಣಾಮವಾಗಿ ರೈತರು ಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಬಗರ್ ಹುಕುಂ ಸಾಗುವಳಿಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಹಾಗೂ ಕೋಲಾರ ತಹಶೀಲ್ದಾರರ ಸಭೆ ಕರೆದು ಚರ್ಚಿಸಲಾಗುವುದು. ಬಡವರ ಕೆಲಸ ನೆನೆಗುದಿಗೆ ಬೀಳದಂತೆ ಎಚ್ಚರವಹಿಸಲಾಗುವುದು. ಗ್ರಾಮೀಣ ಪ್ರದೇಶದ ರೈತರು ಹಾಗೂ ಮತ್ತಿತರ ನಾಗರಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆಯಲು ಅವಕಾಶ ನೀಡಬಾರದು ಎಂದು ಹೇಳಿದರು.
ಕ್ಷೇತ್ರಕ್ಕೆ 23 ಸಾವಿರ ಮನೆ ತರಲಾಗಿದೆ ಎಂದು ಹೇಳಲಾಗಿದೆ. ಆದರೆ ಮನೆಗಳ ವಿತರಣೆ ಕುರಿತು ಪರಿಶೀಲನೆ ನಡೆಸಿದ ಬಳಿಕ, ವಿತರಣೆಯಲ್ಲಿ ಏರುಪೇರಾಗಿದ್ದಲ್ಲಿ ಸರಿಪಡಿಸಲಾಗುವುದು. ವಸತಿ ರಹಿತರೆಲ್ಲರಿಗೂ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಅಧಿಕಾರಿಗಳಾದ ಶಿವಕುಮಾರ್, ನರಸಿಂಹಮೂರ್ತಿ, ಕೃಷ್ಣಪ್ಪ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥರೆಡ್ಡಿ, ಮಖಂಡರಾದ ಸೇಷಾಪುರ ಗೊಪಾಲ್, ಕೃಷ್ಣಾರೆಡ್ಡಿ, ಕೆ.ಪಿ.ನಾಗೇಶ್, ರಾಮಚಂದ್ರೇಗೌಡ, ಸಿ.ರವಿ, ಮಣಿ, ಚಂಗಪ್ಪ ಇದ್ದರು