ರಾಜಕೀಯ ತಂತ್ರಗಾರಿಕೆಯಲ್ಲಿ ಪಳಗಿರುವ ಮಾಜಿ ಕೇಂದ್ರ ಸಚಿವ ಶಾಸಕ ಕೆ.ಎಚ್. ಮುನಿಯಪ್ಪ ಅವರು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆಗಳು ಹೆಚ್ಚಿವೆ

ಕೋಲಾರ : ರಾಜಕೀಯ ತಂತ್ರಗಾರಿಕೆಯಲ್ಲಿ ಪಳಗಿರುವ ಮಾಜಿ ಕೇಂದ್ರ ಸಚಿವ ಹಾಲಿ ದೇವನಹಳ್ಳಿ ಶಾಸಕ ಕೆ.ಎಚ್. ಮುನಿಯಪ್ಪ ಅವರು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಕೋಲಾರ ಮೂಲಗಳು ತಿಳಿಸಿವೆ .

ಸತತ ಏಳು ಬಾರಿ ಕೋಲಾರ ಸಂಸದರಾಗಿ ಆಯ್ಕೆಯಾಗಿದ್ದ ಕೆ.ಎಚ್.ಮುನಿಯಪ್ಪ , ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಎಐಸಿಸಿ ವರ್ಕಿಂಗ್ ಕಮಿಟಿಯಲ್ಲೂ ಸದಸ್ಯತ್ವ ಪಡೆಯುವ ಮೂಲಕ ಸೋನಿಯಾಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದಾರೆ .

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ತಮ್ಮದೇ ಪಕ್ಷದ ಶಾಸಕರ ಪ್ರಯತ್ನದಿಂದ ಸೋಲುಂಡಿದ್ದ ಕೆ.ಎಚ್. ಮುನಿಯಪ್ಪ , ಜಿಲ್ಲೆಯ ಕೆ.ಆರ್ ರಮೇಶ್‌ ಕುಮಾರ್‌ ಮತ್ತವರ ಘಟಬಂಧನ್‌ನಿಂದ ದೂರವಿದ್ದರು. ಕಾಂಗ್ರೆಸ್ ಪಕ್ಷದಲ್ಲೇ ಇದ್ದರೂ ಮಾಜಿ ಶಾಸಕ ಕೆ.ಆರ್ ರಮೇಶ್‌ ಕುಮಾರ್‌ ತಂಡದ ವಿರುದ್ಧ ತೊಡೆತಟ್ಟಿ , ಬಹಿರಂಗವಾಗಿಯೇ ಸುದ್ದಿಗೋಷ್ಟಿ ನಡೆಸಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದರು.

ಇದೀಗ ರಮೇಶ್ ಕುಮಾರ್ ಸೋಲುಂಡಿದ್ದು , ಕೆ.ಎಚ್ ಮುನಿಯಪ್ಪ ದೇವನಹಳ್ಳಿಯಲ್ಲಿ ಶಾಸಕರಾಗಿ ಹೊರಹೊಮ್ಮಿದ್ದಾರೆ . ಎಡಗೈ ದಲಿತ ಸಮುದಾಯದ ರಾಷ್ಟ್ರಮಟ್ಟದ ನಾಯಕರಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಬೆಂಬಲ ಸಿಕ್ಕಿರುವುದರಿಂದ ಮೂವರು ಡಿಸಿಎಂಗಳ ಆಯ್ಕೆಯ ಕೂಗು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ದಲಿತ ಎಡಗೈ ಸಮುದಾಯದ ಹಿರಿಯ ನಾಯಕರಾಗಿರುವ ಕೆ.ಎಚ್ ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಆ ಸಮುದಾಯಕ್ಕೆ ನ್ಯಾಯ ಒದಗಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದಂತಿದೆ.

ಜತೆಗೆ ಸತತ 2 ನೇ ಬಾರಿಗೆ 50 ಸಾವಿರಕ್ಕೂ ಹೆಚ್ಚಿನ ಭಾರಿ ಮತಗಳ ಅಂತರದಿಂದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಕಲಾ ಶಶಿಧರ್ ಕೆಜಿಎಫ್ ಶಾಸಕರಾಗಿ ಆಯ್ಕೆಯಾಗಿದ್ದು , ಒಂದೇ ಶಾಸನ ಸಭೆಯಲ್ಲಿ ತಂದೆ ಮಗಳು ಶಾಸಕರಾಗಿರುವುದು ವಿಶೇಷವಾಗಿದೆ.

ಈ ನಡುವೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಕೆ.ಎಚ್.ಮುನಿಯಪ್ಪ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದ್ದು , ಕಳೆದ ಲೋಕಸಭಾ ಸೋಲು , ತಮ್ಮ ಸೋಲಿಗೆ ಸ್ವಪಕ್ಷಿಯರೇ ಕಾರಣ ಎಂಬ ಸತ್ಯ ಅರಿತಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಜಿಲ್ಲೆಯಲ್ಲಿ ಮತ್ತೆ ತಮ್ಮ ಶಕ್ತಿ ತೋರಲು ಉತ್ತಮ ಅವಕಾಶ ಸಿಕ್ಕಿದೆ.

7 ಬಾರಿ ಸಂಸದರಾಗಿ ಕೋಲಾರದ ಅಗತ್ಯತೆಗಳು , ಬೇಡಿಕೆಗಳ ಕುರಿತು ಅರಿತಿರುವ ಕೆ.ಎಚ್.ಮುನಿಯಪ್ಪ ಡಿಸಿಎಂ ಆಗುವ ಸಾಧ್ಯತೆಗಳಿಂದಾಗಿ ಕೋಲಾರ ಕಾಂಗ್ರೆಸ್‌ನಲ್ಲಿ ಘಟಬಂಧನಿಂದ ದೂರವಿದ್ದ ಅವರ ಬೆಂಬಲಿಗರ ಗುಂಪು ಮತ್ತೆ ಕ್ರಿಯಾಶೀಲವಾಗಲಿದೆ .