ರಾಜಕಾಲುವೆಗಳನ್ನು ಮುಚ್ಚಿ ಮಳೆ ನೀರನ್ನು ಕೆರೆಗಳಿಗೆ ಹರಿಯದಂತೆ ಮುಚ್ಚಿರುವುದರಿಂದ ನೀರು ರೈತರ ಕೃಷಿ ಭೂಮಿಗೆ ಹಾಗೂ ತಗ್ಗು ಪ್ರದೇಶಕ್ಕೆ ನುಗ್ಗಿ ಅವಾಂತರ ಆರೋಪ

ಸಾವಿರಾರು ಕೆರೆಗಳನ್ನು ಹೊಂದಿರುವ ಜಿಲ್ಲೆಯನ್ನು ಕೆರೆಗಳ ತವರು ಎಂದು ಪ್ರಸಿದ್ದಿ ಪಡೆದಿರುವ ಪೂರ್ವಜರು ಬೆವರು ಸುರಿಸಿ ಒಗ್ಗಟ್ಟಿನಿಂದ ಕಟ್ಟಿ ಅಭಿವೃದ್ದಿ ಪಡಿಸಿರುವ ಕೆರೆಗಳು ದಿನೇ ದಿನೇ ಒತ್ತುವರಿದಾರರಿಂದ ತನ್ನ ಸ್ವರೂಪವನ್ನು ಕಳೆದುಕೊಂಡು ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಮನುಷ್ಯನ ದುರಾಸೆಯೇ ಮೂಲ ಕಾರಣವಾಗಿದೆ ಎಂದರು.

ಪ್ರತಿವರ್ಷ ಮುಂಗಾರು ಮಳೆ ಆರಂಭವಾದರೆ ಜಿಲ್ಲೆಯ ರೈತರಿಗೆ ಬೆಳೆನಷ್ಟದ ಚಿಂತೆ ಜನ ಸಾಮಾನ್ಯರಿಗೆ ಬದುಕಿನ ಚಿಂತೆಯಾಗಿದೆ. ಮಳೆ ನೀರು ಸರಾಗವಾಗಿ ಹರಿಯುವ ರಾಜಕಾಲುವೆಗಳು ಇಂದು ಒತ್ತುವರಿಯಿಂದ ಸಂಪೂರ್ಣವಾಗಿ ತನ್ನ ಸ್ವರೂಪವನ್ನು ಕಳೆದುಕೊಂಡು ಬಲಾಡ್ಯರು ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡುವ ಜೊತೆಗೆ ರಾಜಕಾಲುವೆಗಳನ್ನು ಮುಚ್ಚಿ ಮಳೆ ನೀರನ್ನು ಕೆರೆಗಳಿಗೆ ಹರಿಯದಂತೆ ಮುಚ್ಚಿರುವುದರಿಂದ ಮಳೆ ನೀರು  ರೈತರ ಕೃಷಿ ಭೂಮಿಗೆ ಹಾಗೂ ತಗ್ಗು ಪ್ರದೇಶದ ಬಡವರ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಲು ಒತ್ತುವರಿದಾರರೇ ನೇರಕಾರಣವಾಗಿದ್ದಾರೆಂದು ಆರೋಪ ಮಾಡಿದರು. 

ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಮಳೆ ನೀರಿನಿಂದ ನಷ್ಟವಾಗಿರುವ ಸ್ಥಳ ಪರಿಶೀಲನೆಗೆ ಬರುವ ಅಧಿಕಾರಿಗಳು ಸಂತಸ್ತ್ರರಿಗೆ ದಿಕ್ಕುತಪ್ಪಿಸಲು ನೂರೊಂದು ನೆಪ ಹೇಳಿ 24 ಗಂಟೆಯಲ್ಲಿ ಒತ್ತುವರಿಗಳನ್ನು ತೆರವುಗೊಳಿಸುತ್ತೇವೆ. ಜೊತೆಗೆ ರೈತರಿಗೆ ಜನ ಸಾಮಾನ್ಯರಿಗೆ ಪರಿಹಾರವನ್ನು ನೀಡುತ್ತೇವೆಂದು ಹೇಳಿ ಹೋಗುವ ಅಧಿಕಾರಿಗಳು ಮತ್ತೆ 364 ದಿನ ನಾಪತ್ತೆಯಾಗಿ ಸಮಸ್ಯೆಯಾದಾಗ ಪ್ರತ್ಯಕ್ಷವಾಗಿ ಹರಿಕಥೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆಂದು ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.

ಜಿಲ್ಲಾಧ್ಯಂತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳಿಗೆ ಸಂಬಂಧಪಟ್ಟಂತೆ ದಾಖಲೆಗಳ ಸಮೇತ ಕಂದಾಯ ಸರ್ವೆ ಅಧಿಕಾರಿಗಳಿಗೆ ದೂರು ನೀಡಿದರೆ ಒತ್ತುವರಿದಾರರಿಗೆ ಅಧಿಕಾರಿಗಳೇ ಮುಂಚಿತವಾಗಿ ಮೆಸೇಜ್‍ನ್ನು ನೀಡು ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟಿದೆ. ಒಂದು ಪ್ರಕಾರ ಅಧಿಕಾರಿಗಳೇ ಒತ್ತುವರಿದಾರರಿಗೆ ಶ್ರೀರಕ್ಷೆಯಾಗಿ ಕೆಲಸ ಮಾಡುವ ಮುಖಾಂತರ ಜನ ಸಾಮಾನ್ಯರ ಬುದುಕನ್ನು ಕಸಿಯುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ದೂರು ನೀಡಿದರು.