ಶ್ರೀನಿವಾಸಪುರ: ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದು ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿದರು.

ಶ್ರೀನಿವಾಸಪುರ: ಇಲ್ಲಿನ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಮಂಗಳವಾರ ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದು ನಿಗದಿತ ಬಸ್‍ಗಳಲ್ಲಿ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿದರು.
ಮತಗಟ್ಟೆಗೆ ತೆರಳುವ ಮುನ್ನ ಸಿಬ್ಬಂದಿ ಒಟ್ಟಾಗಿ ಕುಳಿತು ಪಡೆದುಕೊಂಡ ಚುನಾವಣಾ ಸಾಮಗ್ರಿ ಪರಿಶೀಲನೆ ನಡೆಸಿ, ಎಲ್ಲವೂ ಸರಿ ಇರುವ ಬಗ್ಗೆ ಖಚಿತಪಡಿಸಿಕೊಂಡರು. ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಬಸ್ ಸಿಬ್ಬಂದಿಗೆ ಮೈದಾನದ ಒಂದು ಮಗ್ಗುಲಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಸೇವಿಸಿದ ಬಳಿಕ ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿಯೊಂದಿಗೆ ಬಸ್‍ನಲ್ಲಿ ಪ್ರಯಾಣ ಬೆಳೆಸಿದರು.
ಸಿಇಒ ಯುಖೇಶ್ ಕುಮಾರ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಆರ್.ಬಿ.ನಂದಿನಿ, ಉಪ ಚುನಾವಣಾಧಿಕಾರಿ ಶಿರಿನ್ ತಾಜ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಇದ್ದರು.
ಕ್ಷೇತ್ರದಲ್ಲಿ 289 ಮತಗಟ್ಟೆ ಸ್ಥಾಪಿಸಲಾಗಿದೆ. ಆ ಪೈಕಿ 78 ಸೂಕ್ಷ್ಮ, 9 ಒಲನರಬಲ್, 145 ವೆಬ್‍ಕಾಸ್ಟಿಂಗ್ ಮತಗಟ್ಟೆಗಳಾಗಿವೆ. ಆಯ್ದ 80 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‍ವರ್ ನೇಮಿಸಲಾಗಿದೆ. 2 ಸಖಿ ಮತಗಟ್ಟೆ, ಅಂಗವಿಕಲರ ಅನುಕೂಲಕ್ಕಾಗಿ 1 ಮತಗಟ್ಟೆ, ಯುವ ಮತದಾರರಿಗಾಗಿ 1 ಮತಗಟ್ಟೆ, ಹಾಗೂ 1 ಕಲ್ಚರಲ್ ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆ ರಕ್ಷಣೆಗೆ ಪೊಲೀಸ್ ಹಾಗೂ ಅರೆಸಾನಾ ಸಿಬ್ಬಂದಿ ಸೇವೆ ಬಳಸಿಕೊಳ್ಳಲಾಗಿಗೆ ಎಂದು ತಹಶೀಲ್ದಾರ್ ತಿಳಿಸಿದರು.