ಕಡ್ಡಾಯ ಮತದಾನ ಸಂವಾದ : ಉದ್ದೇಶ ಪೂರ್ವಕವಾಗಿ ಮತದಾನ ಮಾಡದಿದ್ದವರ ಮೇಲೆ ಕ್ರಮಕೈಗೊಳ್ಳಬೇಕು

ಚುನಾವಣಾ ಆಯೋಗ ಮತದಾನ ಹೆಚ್ಚಿಸಲು ಬಹಳಷ್ಟು ಕ್ರಮ ಕೈಗೊಳ್ಳುತ್ತಿದ್ದರೂ ಕೆಲವರು ಉದ್ದೇಶ ಪೂರ್ವಕವಾಗಿ ಮತದಾನ ಮಾಡದೇ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುತ್ತಾರೆ. ಅಂತಹ ಮತದಾರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಚುನಾವಣಾ ಆಯೋಗ ನಿಯಮ ರೂಪಿಸಬೇಕು. ಇದರಿಂದ ಮತದಾನ ಮಾಡದವರಿಂದ ಚುನಾವಣಾ ಫಲಿತಾಂಶದ ಮೇಲೆ ಆಗುವ ಪರಿಣಾಮವೂ ಕಡಿಮೆಯಾಗುತ್ತದೆ. ಅಲ್ಲದೇ ಶೇಕಡಾವಾರು ಮತದಾನದ ಸಂಖ್ಯೆಯೂ ಹೆಚ್ಚುತ್ತದೆ.
ಈ ಅಭಿಪ್ರಾಯ ವ್ಯಕ್ತವಾದುದು ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ಕಡ್ಡಾಯ ಮತದಾನ ಸಂವಾದ” ಕಾರ್ಯಕ್ರಮದಲ್ಲಿ.
ಚುನಾವಣಾ ಆಯೋಗ ಚುನಾವಣೆಯನ್ನು ಒಂದು ಯದ್ಧದ ಮಾದರಿಯಲ್ಲಿ ಆಗಲು ಬಿಡದೇ ಸರಳವಾಗಿ, ಕಡಿಮೆ ಖರ್ಚಿನಲ್ಲಿ ಆರೋಗ್ಯಪೂರ್ಣ ಸ್ಪರ್ಧೆಯಲ್ಲಿ ನಡೆಯುವಂತೆ ನಿಯಮ ರೂಪಿಸಬೇಕು. ಪ್ರಜಾಪ್ರಭುತ್ವದ ದುರುಪಯೋಗ ಆಗದಂತೆ ಗಮನ ಹರಿಸಬೇಕು. ಆಮಿಷಕ್ಕೊಳಪಟ್ಟು ಮತದಾರರು ಭ್ರಷ್ಟರಾಗದಂತೆ ನೋಡಿಕೊಳ್ಳಬೇಕು ಎಂಬ ಅನಿಸಿಕೆಯೂ ವ್ಯಕ್ತವಾಯಿತು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಯು. ಎಸ್. ಶೆಣೈ ಸಂವಾದದಲ್ಲಿ ಪ್ರಾಸ್ತಾವಿಕ ಮಾತನಾಡಿ, “ಕರ್ನಾಟಕ ವಿಧಾನಸಭಾ ಚುನಾವಣೆ ವ್ಯವಸ್ಥಿತವಾಗಿ ನಡೆಯುವಂತೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಅತೀ ಹೆಚ್ಚು ಜನರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಹಲವು ಕ್ರಮ ಕೈಗೊಂಡಿದೆ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದೆ. ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿದೆ. ಆದರೂ ಬಹಳಷ್ಟು ಮಂದಿ ಈ ದಿನ ತಮ್ಮ ಹಕ್ಕು ಚಲಾಯಿಸುವ ಕರ್ತವ್ಯ ಮರೆತು ಪ್ರವಾಸಕ್ಕೆ ಹೋಗುವುದು, ಬೇರೆ ಕಾರ್ಯಕ್ರಮ ಇಟ್ಟುಕೊಳ್ಳುವುದು, ಮನೆಯಲ್ಲೇ ಮನರಂಜನೆ ಪಡೆಯುತ್ತಾ ಚುನಾವಣೆ ತಮಗೆ ಸಂಬಂಧಿಸಿದ್ದಲ್ಲ ಎಂದು ನಿರ್ಲಕ್ಷ ವಹಿಸುತ್ತಾರೆ. ಈ ಬಗ್ಗೆ ಚಿಂತನ ಮಂಥನ ನಡೆಯಬೇಕು. ಚುನಾವಣಾ ಆಯೋಗ ಉದ್ದೇಶ ಪೂರ್ವಕ ಗೈರು ಹಾಜರಾಗುವವರ ಪಟ್ಟಿ ತಯಾರಿಸಿ ಕಾರಣ ಕೇಳುವ ನೋಟಿಸ್ ಕಳುಹಿಸುವ ಬಗ್ಗೆ ಚಿಂತಿಸಬೇಕು” ಎಂದರು.
ಉದ್ಯಮಿ ಕೆ. ಕೆ. ಕಾಂಚನ್ ಮಾತನಾಡಿ, “ಚುನಾವಣೆಯಲ್ಲಿ ಹಣವೇ ಪ್ರದಾನ ಎಂಬ ನಂಬಿಕೆ ಬಂದು ಬಿಟ್ಟಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಮತದಾರರಿಗೆ ಅರಿವು ಇರಬೇಕು. ಹಣವಂತ, ಪ್ರಬಲ ಸಮುದಾಯದ ವ್ಯಕ್ತಿ, ಜನಪ್ರಿಯ ಪಕ್ಷದ ಅಭ್ಯರ್ಥಿ ಎನ್ನುವುದಕ್ಕಿಂತ ಅವರು ಶುದ್ಧ ಚಾರಿತ್ರ್ಯದವರೇ, ಸಮಾಜಕ್ಕೆ ಒಳಿತು ಮಾಡ ಬಲ್ಲರೇ, ಎನ್ನುವ ಬಗ್ಗೆ ಚಿಂತಿಸಬೇಕು. ಮತದಾನ ತಪ್ಪಿಸಿಕೊಳ್ಳುವವರ ಬಗ್ಗೆ ಕ್ರಮ ಅತ್ಯಗತ್ಯ” ಎಂದರು.
ನಿವೃತ್ತ ಬ್ಯಾಂಕ್ ಮೆನೇಜರ್ ಕೆ. ಪಾಂಡುರಂಗ ಭಟ್ ಮಾತನಾಡಿ, “ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಚೆನ್ನಾಗಿದೆ. ಚುನಾವಣೆಯೂ ಉತ್ಸಾಹದಿಂದಲೇ ನಡೆಯುತ್ತದೆ ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದವರು ಫಲಿತಾಂಶದ ನಂತರ ಬೇಡದ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ, ಟೀಕಿಸುತ್ತಾರೆ. ಅವರಿಗೆ ಚುರುಕು ಮುಟ್ಟಿಸುವುದು ಅಗತ್ಯ” ಎಂದರು.
ತಲ್ಲೂರು ಗ್ರಾಮ ಪಂಚಾಯತ್ ಸದಸ್ಯೆ ಜುಡಿತ್ ಮೆಂಡೋನ್ಸಾ ಮಾತನಾಡಿ, “ಟಿ. ಎನ್. ಶೇಷನ್ ಅವರಂತಹ ಚುನಾವಣಾಧಿಕಾರಿಗಳು ಚುನಾವಣಾ ವ್ಯವಸ್ಥೆಗೆ ಬಹಳಷ್ಟು ಸುಧಾರಣೆ ತಂದರು. ಆದರೂ ಇಂದಿನ ಚುನಾವಣಾ ವಾತಾವರಣ ಕಂಡಾಗ ಚುನಾವಣಾ ಆಯೋಗ ಇನ್ನಷ್ಟು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದೆನಿಸುತ್ತದೆ” ಎಂದರು.
ಲೇಖಕ ರಮಾನಂದ ಕಾರಂತ ಮಾತನಾಡಿ, “ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಶಕ್ತಿಯುತವಾಗಿದೆ ಜನರೂ ಜಾಗೃತರಾಗಿದ್ದಾರೆ. ವಿದ್ಯಾವಂತರೂ ತಮ್ಮ ಕರ್ತವ್ಯ ನಿರ್ವಹಣೆ ಬಗ್ಗೆ ಇನ್ನಷ್ಟು ಜಾಗೃತರಾಗಬೇಕು” ಎಂದರು.
ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ದೇವರಾಜ್ ಮಾತನಾಡಿ, “ಕೋಟ್ಯಾಂತರ ರೂ. ಚುನಾವಣಾ ವೆಚ್ಚ, ಹತ್ತಾರು ಆಮಿಷಗಳು, ಖಾರವಾದ ಮಾತುಗಳನ್ನು ಹೊರತು ಪಡಿಸಿದ ಸರಳ ಮಾದರಿಯ ಜನ ಮೆಚ್ಚುವ ವಿಧಾನದಲ್ಲಿ ಚುನಾವಣೆ ನಡೆಸುವ ಬಗ್ಗೆ ರಾಷ್ಟ್ರೀಯ ಚಿಂತನ ಆಯೋಗ ಏರ್ಪಡಿಸಬೇಕು” ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಸತ್ಯನಾರಾಯಣ ಪುರಾಣಿಕ, “ಸಮಾಜವನ್ನು ಜಾಗೃತಿಗೊಳಿಸುವ ಅಭಿಯಾನದಲ್ಲಿ ನಾವೂ ಪಾಲ್ಗೊಳ್ಳುತ್ತಿದ್ದೇವೆ. ಹಿತಕರ ವಾತಾವರಣದಲ್ಲಿ ಚುನಾವಣೆ ನಡೆಯಬೇಕು. ಎಲ್ಲರೂ ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳುವುದು ಅಗತ್ಯ. ಈ ವಿಚಾರದಲ್ಲಿ ಅಸಡ್ಡೆ, ನಿರ್ಲಕ್ಷತನ, ಗುರುತರ ಅಪರಾಧವೆಂದೇ ಪರಿಗಣಿಸ ಬೇಕಾಗುತ್ತದೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಎಲ್ಲ ಮತದಾರರು ಪಾಲ್ಗೊಳ್ಳಬೇಕೆಂದು ವಿನಂತಿ ಮಾಡುತ್ತೇವೆ” ಎಂದರು.
ಶ್ರೀನಿವಾಸ ಶೇಟ್ ಸ್ವಾಗತಿಸಿದರು, ಸಚಿನ್ ನಕ್ಕತ್ತಾಯ ಸಂವಾದ ನಿರೂಪಿಸಿದರು.