ಶ್ರೀನಿವಾಸಪುರ: ಬಿಜೆಪಿ ಸರ್ಕಾರ ಅಕ್ಕಿ ನೀಡುವ ಪ್ರಮಾಣ ಕಡಿಮೆ ಮಾಡುವ ಮೂಲಕ ಬಡವರ ಅನ್ನಕ್ಕೆ ಕಲ್ಲುಹಾಕಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಕೊತ್ತಪೇಟ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಡವರ ಕಷ್ಟದ ಅರಿವಿಲ್ಲ. ಹಾಗಾಗಿಯೇ ಬಡವರು ಬಳಸುವ ವಸ್ತುಗಳ ಬೆಲೆ ದುಬಾರಿಯಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ರೂ.1200 ಆಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ನೀಡುವ ಅಕ್ಕಿ ಪ್ರಮಾಣ 10 ಕೆಜೆಗೆ ಹೆಚ್ಚಿಸಲಾಗುವುದು. ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಲಾಗುವುದು. ಜನ ಸಾಮಾನ್ಯರು ಬಳಸುವ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು ರೂ.50 ಸಾವಿರದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಮನೆ ಒಡತಿಗೆ ತಿಂಗಳಿಗೆ ರೂ.2000 ನೀಡಲಾಗುವುದು ಎಂದು ಹೇಳಿದರು.
ನಾನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಎಲ್ಲ ಗ್ರಾಮಗಳಿಗೂ ಪಕ್ಷಾತೀತವಾಗಿ ಸರ್ಕಾರದ ಸೌಲಭ್ಯ ತಲುಪಿಸಿದ್ದೇನೆ. ವಿಶೇಷವಾಗಿ 23 ಸಾವಿರ ಮನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಮತದಾರರ ಋಣ ನನ್ನ ಮೇಲಿದೆ. ಅವರಿಗೆ ಇನ್ನಷ್ಟು ಅನುಕೂಲ ಒದಗಿಸುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮತ ನೀಡುವುದರ ಮೂಲಕ ಆಶೀರ್ವಾದ ಮಾಡಲು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಮುಖಂಡರಾದ ಪಿಚ್ಚಳ್ಳಿ ಶ್ರೀನಿವಾಸ್, ಕೆ.ಕೆ.ಮಂಜು, ಕೃಷ್ಣಾರೆಡ್ಡಿ, ಎನ್.ತಿಮ್ಮಯ್ಯ, ಚಂದ್ರಪ್ಪ, ಸಿ.ವಿ.ಅರ್ಜುನ್, ಈಶ್ವರಪ್ಪ, ವೆಂಕಟರವಣರೆಡ್ಡಿ, ಕೆ.ಎಸ್.ಶ್ರೀನಿವಾಸ್, ಆದಿರೆಡ್ಡಿ, ರಾಮಲಿಂಗಾರೆಡ್ಡಿ, ಎಂ.ಎನ್.ವೇಣು, ಜಗದೀಶ್, ರಘು ಇದ್ದರು.