ಚುನಾವಣೆ ಅಕ್ರಮಗಳಿಗೆ ಕಡಿವಾಣ ಹಾಕಲು ಬ್ಯಾಂಕ್‌ಗಳ ಸಹಕಾರ ಅಗತ್ಯ – ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ

ಕೋಲಾರ : ಸಾರ್ವತ್ರಿಕ ಚುನಾವಣೆ -2023 ಸಂಬಂಧವಾಗಿ ನೀತಿ ಸಂಹಿತೆ ಜಾರಿಯಾಗಿದ್ದು , ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ನಗದು ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಲು ಬ್ಯಾಂಕ್‌ಗಳವರು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಮನವಿ ಮಾಡಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಬ್ಯಾಂಕ್ ನೌಕರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೀತಿ ಸಂಹಿತೆ ಜಾರಿಯಾಗಿರುವುದರಿಂದ ಎಲ್ಲ ತರಹದ ಖಾತೆಗಳಲ್ಲಿ ನಗದು ವ್ಯವಹಾರದ ಮೇಲೆ ನಿಗಾ ಇಡಬೇಕಾಗುತ್ತದೆ.
ಸಾರ್ವಜನಿಕರೂ ಇದಕ್ಕೆ ಸಹಕರಿಸಬೇಕು. ಅಲ್ಲದೆ 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದಾಗಿ ಖಾತೆಯಿಂದ ಸೆಳೆಯುವುದು ಹಾಗೂ ಖಾತೆಗೆ ತುಂಬುವ ಪ್ರಕ್ರಿಯೆಯ ಬಗ್ಗೆ ನಿಗಾ ವಹಿಸಬೇಕಿದೆ ಎಂದರು. ಈಗಾಗಲೇ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಬ್ಯಾಂಕ್‌ಗಳಿಂದ ಎಟಿಎಂ ಗಳಿಗೆ ಹಣ ತುಂಬುವ ವಾಹನಗಳ ಹಾಗೂ ವಾಹನಗಳಲ್ಲಿರುವ ಹಣದ ಮಾಹಿತಿಯನ್ನು ಏಇಇಒ ಆಫ್ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕು. ಆಫ್‌ನಲ್ಲಿ ನಮೂದಿಸಿರುವ ಮಾಹಿತಿ ಆಧರಿಸಿ ಒಂದು ಕ್ಯೂಆರ್ ಕೋಡ್ ಸೃಜಿಸಲಾಗುತ್ತದೆ.
ಸದರಿ ಕ್ಯೂಆರ್ ಕೋಡ್ನ್ನು ಹಣಸಾಗಿಸುವ ವಾಹನಕ್ಕೆ ಲಿಂಕ್ ಮಾಡಲಾಗಿರುತ್ತದೆ. ಯಾವುದೇ ಚೆಕ್ ಪೋಸ್ಟ್‌ಗಳಲ್ಲಿ ಕ್ಯೂ ಆರ್ ಕೋಡ್‌ನ್ನು ಸ್ಕ್ಯಾನ್ ಮಾಡಿದಾಗ ವಾಹನ ಮತ್ತು ಮೊತ್ತದ ವಿವರಗಳು ಲಭ್ಯವಾಗುತ್ತದೆ. ವಾಹನದಲ್ಲಾಗಲೀ ಮೊತ್ತದಲ್ಲಾಗಲೀ ಯಾವುದೇ ವ್ಯತ್ಯಾಸ ಕಂಡುಬಂದರೆ ನಿಯೋಜಿಸಿರುವ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ.
ಅಕ್ರಮ ನಗದು ವ್ಯವಹಾರಗಳ ಬಗ್ಗೆ ನಿರ್ಧಿಷ್ಟ ಮಾಹಿತಿ ನೀಡಿದರೆ ತ್ವರಿತವಾಗಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು , ಸ್ಥಳೀಯ ಬ್ಯಾಂಕ್‌ಗಳು ಹಾಗೂ ಸಹಕಾರಿ ಬ್ಯಾಂಕ್‌ಗಳ ವ್ಯವಸ್ಥಾಪಕರು , ಅಂಚೆ ಕಛೇರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .