ಖುಷಿಯಿಂದ ಪರೀಕ್ಷೆ ಬರೆದ ಮಕ್ಕಳು-ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆ ಯಶಸ್ವಿಪ್ರಥಮ ಭಾಷೆಗೆ 244 ಮಂದಿ ಗೈರು-ಲೋಪಕ್ಕೆ ಎಡೆಯಿಲ್ಲ-ಡಿಡಿಪಿಐ ಕೃಷ್ಣಮೂರ್ತಿ

ಕೋಲಾರ:- ಜಿಲ್ಲೆಯ 83 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಖಾಸಗಿ ಅಭ್ಯರ್ಥಿಗಳು 67 ಮಂದಿ, ಹೊಸ ಅಭ್ಯರ್ಥಿಗಳು 177 ಮಂದಿ ಸೇರಿದಂತೆ ಒಟ್ಟು 244 ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಬರುವ ಮಕ್ಕಳಿಗೆ ಸ್ವತಃ ಹೂ ನೀಡಿ ಸ್ವಾಗತಿಸಿ, ಶುಭ ಕೋರಿದ ಅವರು, ಪರೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದರು.
2020ರ ಮಾರ್ಚ್‍ನಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 310 ವಿದ್ಯಾರ್ಥಿಗಳು ಮೊದಲ ದಿನ ಗೈರಾಗಿದ್ದರು ಆದರೆ ಈ ಬಾರಿ ಅದರ ಪ್ರಮಾಣ ಕೇವಲ 244ಕ್ಕಿಳಿದಿದೆ ಎಂದರು.
ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 19813 ವಿದ್ಯಾರ್ಥಿಗಳ ಪೈಕಿ 19569 ಮಂದಿ ಹಾಜರಾಗಿದ್ದು, 244 ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.


ತಾಲ್ಲೂಕುವಾರು ಹಾಜರಿ ವಿವರ


ಬಂಗಾರಪೇಟೆ ತಾಲ್ಲೂಕಿನ 9 ಕೇಂದ್ರಗಳಲ್ಲಿ ಪ್ರಥಮ ಭಾಷೆಗೆ 2390 ಮಂದಿ ನೊಂದಾಯಿಸಿದ್ದು, 2368 ಮಂದಿ ಹಾಜರಾಗಿ 22 ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ 13 ಕೇಂದ್ರಗಳಲ್ಲಿ 3225 ಮಕ್ಕಳು ಹೆಸರು ನೊಂದಾಯಿಸಿದ್ದು, 3185 ಮಂದಿ ಹಾಜರಾಗಿ 40 ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನ 22 ಕೇಂದ್ರಗಳಲ್ಲಿ 4987 ಮಂದಿ ಹೆಸರು ನೊಂದಾಯಿಸಿದ್ದು, 4933 ಮಂದಿ ಹಾಜರಾಗಿ ಕೇವಲ 54 ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ 14 ಕೇಂದ್ರಗಳಲ್ಲಿ 3058 ಮಂದಿ ಹೆಸರು ನೊಂದಾಯಿಸಿದ್ದು, 3043 ಮಂದಿ ಹಾಜರಾಗಿದ್ದು, 15 ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ತಾಲ್ಲೂಕಿನ 13 ಕೇಂದ್ರಗಳಲ್ಲಿ 3068 ಮಂದಿ ನೊಂದಾಯಿಸಿದ್ದು, 3038 ಮಂದಿ ಹಾಜರಾಗಿದ್ದು, 30 ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ 13 ಕೇಂದ್ರಗಳಲ್ಲಿ 2585 ಮಂದಿ ಹೆಸರು ನೊಂದಾಯಿಸಿದ್ದು, 2569 ಮಂದಿ ಹಾಜರಾಗಿದ್ದು, 16 ಮಂದಿ ಗೈರಾಗಿದ್ದಾರೆ.


ಖಾಸಗಿ ಕೇಂದ್ರದಲ್ಲಿ 67 ಮಂದಿ ಗೈರು


ಕೋಲಾರದ ಖಾಸಗಿ ಅಭ್ಯರ್ಥಿಗಳ ಕೇಂದ್ರದಲ್ಲಿ 500 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ 433 ಮಂದಿ ಹಾಜರಾಗಿದ್ದು, ಉಳಿದ 67 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಮೊದಲ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.


ಬೆಳಗ್ಗೆ 9-50ರಿಂದಲೇ ಕೇಂದ್ರಕ್ಕೆ ಪ್ರವೇಶ


ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಹಾಕಲು ಬಂದಿದ್ದರಾದರೂ, ಕೋವಿಡ್ ಆತಂಕವಿಲ್ಲದ ಕಾರಣ ಮಕ್ಕಳು ನೇರವಾಗಿ ಪರೀಕ್ಷಾ ಕೊಠಡಿಗಳಿಗೆ ತೆರಳಿದರು.
ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯ ಜಾಗೃತದಳ ತಂಡ ಸೇರಿದಂತೆ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಡಿಡಿಪಿಐ ಕೃಷ್ಣಮೂರ್ತಿ, ಡಿವೈಪಿಸಿಗಳಾದ ಚಂದ್ರಕಲಾ, ಮಂಜುಳಾ, ಎವೈಪಿಸಿ ಮೋಹನ್‍ಬಾಬು, ಪ್ರಭಾರ ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ ಮತ್ತಿತರರೂ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದರಲ್ಲದೇ ಸಣ್ಣಪುಟ್ಟ ಲೋಪಗಳಿಗೂ ಅವಕಾಶವಿಲ್ಲದಂತೆ ಎಚ್ಚರವಹಿಸಿ ಮೆಚ್ಚುಗೆಗೆ ಪಾತ್ರವಾದರು.
ಎಲ್ಲಾ ಕೇಂದ್ರಗಳಲ್ಲೂ ಭದ್ರತೆಗಾಗಿ ಮಹಿಳಾ,ಪುರಷ ಪೊಲೀಸರನ್ನು ನಿಯೋಜಿಸಿದ್ದು, ಎಲ್ಲೂ ಸಮಸ್ಯೆಗಳು ಕಂಡು ಬರಲಿಲ್ಲ.
ಒಟ್ಟಾರೆ ಮೊದಲದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಐದು ವಿಷಯಗಳ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯ ತಂದುಕೊಟ್ಟಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ನೂತನ ಪಿಯು ಕಾಲೇಜು ಕೇಂದ್ರದಲ್ಲಿ ಡಿಡಿಪಿಐ ಅವರೊಂದಿಗೆ ಮುಖ್ಯ ಅಧೀಕ್ಷಕ ಹಾಗೂ ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಖಜಾಂಚಿ ಜಿ.ಎನ್.ವೇಣುಗೋಪಾಲ್, ಪ್ರಶ್ನೆಪತ್ರಿಕೆ ಅಭಿರಕ್ಷಕಿ ರಾಧಮ್ಮ, ಪರೀಕ್ಷಾ ಸಿಬ್ಬಂದಿ ಶಿಕ್ಷಕರಾದ ಭವಾನಿ, ಲಕ್ಷ್ಮೀದೇವಮ್ಮ, ಎಂ.ರಮೇಶ್,ಮಂಜುಳಾ, ಎಂ.ವೇದಾ, ಸುರೇಶ್, ಬಿ.ಜಯಂತಿ, ಸಂಗೀತಾ ಅಂಗಡಿ, ಲಲಿತಾ ಕುಮಾರಿ, ಸೌಮ್ಯ, ಮಂಜುಳಾ,ನಿರ್ಮಲಮ್ಮ, ನಾರಾಯಣಸ್ವಾಮಿ, ಸುಷ್ಮಾ, ವೆಂಕಟೇಶ್, ಸುಬ್ರಮಣಿ,ಶ್ರೀನಿವಾಸಲು ಆನಂದ್ ಹಾಜರಿದ್ದರು.