ಮೂಡ್ಲಕಟ್ಟೆ ಎಂ ಐ ಟಿ: ವಿಶ್ವ ಜಲ ದಿನಾಚರಣೆ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನ ಸಿವಿಲ್‌ ಇಂಜಿನಿಯರಿಂಗ್ ವಿಭಾಗ ಹಾಗೂ ಇಕೋ ಕ್ಲಬ್ ಇದರ ಸಹಭಾಗಿತ್ವದಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು.  ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಇವರು ಆಗಮಿಸಿ ನೀರಿನ ಮಹತ್ವ ಮತ್ತು ಸಂರಕ್ಷಣೆ ವಿಷಯದ ಕುರಿತು ವಿಚಾರ ವಿನಿಮಯ ಮಾಡಿದರು. ನೀರನ್ನು ಜೀವ ಜಲ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ನೀರಿನ ಅಭಾವದ ಕುರಿತು ಎಚ್ಚರಿಸುತ್ತ ಬಾವಿಯ ನೀರಿನ ಮಟ್ಟ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಹೊಸ ಹೊಸ ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಐಎಮ್ ಜೆ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊಫ಼ೆಸರ್ ದೋಮ ಚಂದ್ರಶೇಖರ ಮಾತನಾಡಿ ಮುಂದಿನ ಪೀಳಿಗೆಗೆ ನೀರನ್ನು ಕಾಯ್ದಿರಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ವಿದ್ಯಾರ್ಥಿಗಳು ಆ ಕುರಿತು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅದನ್ನು ಎಲ್ಲರೂ ಪಾಲಿಸಬೇಕು ಎಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಐಎಮ್ ಜೆಐ ಎಸ್ ಸಿ ಕಾಲೇಜಿನ ಪ್ರಾಂಶುಪಾಲೆ ಡಾ ಪ್ರತಿಭ ಪಟೇಲ್, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|ರಾಮಕೃಷ್ಣ ಹೆಗ್ಡೆ, ಸಿವಿಲ್‌ ವಿಭಾಗದ ಮುಖ್ಯಸ್ಥ ಪ್ರೊಫ಼ೆಸರ್ ಪ್ರಶಾಂತ ಹೆಗ್ಡೆ, ಸಿಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಥಮ್ ಮೈಕೆಲ್ ಕಾರ್ಯಕ್ರಮ ನಿರೂಪಿಸಿ, ಆಮೆ ನಾಂಗ್ಬೋ ವಂದಿಸಿದರು.