ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಶೇ.4 ರಷ್ಟು ಮೀಸಲಾತಿ ವಾಪಸ್ ಪಡೆದು ಒಂದು ಸಮುದಾಯಕ್ಕೆ ಅನ್ಯಾಯ ಮಾಡಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಶೇ.4 ರಷ್ಟು ಮೀಸಲಾತಿ ವಾಪಸ್ ಪಡೆಯುವುದರ ಮೂಲಕ ಒಂದು ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸಮಾಜದಲ್ಲಿ ಮತೀಯವಾದ ಬಿತ್ತುತ್ತಿದೆ. ಸಮಾಜ ಒಡೆಯುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಗೋಡೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿಲ್ಲ. ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಅಲ್ಪ ಸಂಖ್ಯಾತರು ನಡೆಸುವ ವ್ಯಾಪಾರಕ್ಕೆ ಕಲ್ಲು ಹಾಕುತ್ತಿದೆ. ಮತದಾರರು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು. ಎಲ್ಲಕಿಂತ ದೇಶ ಮುಖ್ಯ. ದೇಶಕ್ಕೆ ಗಂಡಾಂತರ ತರುವುದನ್ನು ಸಹಿಸಲಾಗದು ಎಂದು ಹೇಳಿದರು.
ಕೇಂದ್ರ ಸರ್ಕಾರ ಶೇ.18 ಜಿಎಸ್‍ಟಿ ಹಾಕುವುದರ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಬಡವರು ಬಳಸುವ ಗೃಹ ನಿರ್ಮಾಣ ವಸ್ತುಗಳನ್ನೂ ಜಿಎಸ್‍ಟಿಯಿಂದ ಹೊರಗಿಟ್ಟಿಲ್ಲ. ಕೊರೊನಾ ಸಂದರ್ಭದಲ್ಲಿ ವೈಜ್ಞಾನಿಕ ಕ್ರಮ ಕೈಗೊಳ್ಳುವ ಬದಲು ಮೊಂಬತ್ತಿ ಬೆಳಗಲು ಹೇಳಿದ್ದು ಸಾವಿರಾರು ಜನರ ಸಾವಿಗೆ ಕಾರಣವಾಯಿತು. ರಾಮನ ಹೆಸರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.
ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೇರೆಯಲ್ಲ, ಜೆಡಿಎಸ್ ಬೇರೆಯಲ್ಲ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪರಸ್ಪರ ಸಹಕಾರ ಮುಂದುವರಿದಿದೆ. ಜಿಲ್ಲೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಸೇರಿದಂತೆ ಕಾಂಗ್ರೆಸ್ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯಕರ್ತರು ಎಲ್ಲ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮುಖಂಡ ಬಿ.ಎಂ.ಪ್ರಕಾಶ್ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಸರ್ಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ವಿತರಣೆ ಮಾಡಿದ್ದಾರೆ. ವಿರೋಧಿಗಳು ವಿನಾಕಾರಣ ಕೆಸಿ ವ್ಯಾಲಿ ನೀರಿನ ಬಗ್ಗೆ ಅಪಸ್ವರ ಎತ್ತಿ, ಅಪಪ್ರಜಾರ ಮಾಡುತ್ತಿದ್ದಾರೆ. ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಜನರು ಸಾಕ್ಷಿಯಾಗಿದ್ದಾರೆ. ರಮೇಶ್ ಕುಮಾರ್ ಸತತವಾಗಿ ಮೂರನೇ ಬಾರಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ಎನ್.ಜಿ.ಬ್ಯಾಟಪ್ಪ, ಗೋವಿಂದಸ್ವಾಮಿ, ಮ್ಯಾಕಲ ನಾರಾಯಣಸ್ವಾಮಿ, ಕೃಷ್ಣೇಗೌಡ, ಸೈಯದ್ ಖಾದರ್, ಕೊಂಡಸಂದ್ರ ಶಿವಾರೆಡ್ಡಿ, ಎನ್.ಹನುಮೇಶ್, ಎಸ್.ವಿ.ಸುಧಾಕರ್, ಕೆ.ಕೆ.ಮಂಜು, ನಾರಾಯಣಸ್ವಾಮಿ, ನಾಗೇಶ್, ಉಮಾ, ಸಂಜಯ್ ರೆಡ್ಡಿ, ರೆಡ್ಡಪ್ಪ, ಅಕ್ಬರ್ ಷರೀಫ್, ವೆಂಕಟಾದ್ರಿ, ಸೀತಾರಾಮರೆಡ್ಡಿ, ರಾಮಮೂರ್ತಿ ಇದ್ದರು.
ರೋಡ್ ಷೋ: ಪಟ್ಟಣದ ಎಂಜಿ ರಸ್ತೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್, ಕಾಂಗ್ರೆಸ್ ಮುಖಂಡರೊಂದಿಗೆ ರೋಡ್ ಷೋ ನಡೆಸಿದರು. ರಸ್ತೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.