ಪಟ್ಟಣದ ಪುರಸಭೆ ಕಚೇರಿ ಮುಂದೆ ಶನಿವಾರ ವಿವಿಧ ದಲಿತಪರ ಸಂಘಟನೆಗಳ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ನೇತೃತ್ವದಲ್ಲಿ ಧರಣಿ

ಶ್ರೀನಿವಾಸಪುರ: ಪಟ್ಟಣದ ಪುರಸಭೆ ಕಚೇರಿ ಮುಂದೆ ಶನಿವಾರ ವಿವಿಧ ದಲಿತಪರ ಸಂಘಟನೆಗಳ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ನೇತೃತ್ವದಲ್ಲಿ ಧರಣಿ ನಡೆಸಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಅವರ ಕೆಲಸಕ್ಕೆ ವಿನಾಕಾರಣ ಅಡ್ಡಿಪಡಿಸುವುದರ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಜಮೀನಿಗೆ ಇ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಧರಣಿ ನಿರತರು ಆಪಾದಿಸಿದರು.
ಮುಖ್ಯಾಧಿಕಾರಿ ಪುರಸಭೆಯಲ್ಲಿ ನಡೆಸಿರುವ ಅಕ್ರಮ ವ್ಯವಹಾರ ಕುರಿತು ತನಿಖೆ ನಡೆಸಬೇಕು. ಹಣಕಾಸು ವಹಿವಾಟಿನ ಬಗ್ಗೆಯೂ ತನಿಕೆ ಮಾಡಬೇಕು. ಮುಖ್ಯವಾಗಿ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಭೇಟಿ: ತಹಶೀಲ್ದಾರ್ ಶಿರಿನ್ ತಾಜ್ ಸ್ಥಳಕ್ಕೆ ಭೇಟಿ ನೀಡಿ, ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರ ನೀಡಿದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸುವುದಗಿ ತಿಳಿಸಿದರು. ಆದರೆ ಅವರ ಮಾತಿಗೆ ಮನ್ನಣೆ ನೀಡದ ಧರಣಿನಿರತರು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರು ಸ್ಥಳಕ್ಕೆ ಬರುವ ವರೆಗೆ ಧರಣಿ ವಾಪಸ್ ಪಡೆಯಲು ನಿರಾಕರಿಸಿದರು.


ಆದಿಜಾಂಭವ ಚಾರಿಟಬಲ್ ಟ್ರಸ್ಟ್, ಆದಿಜಾಂಭವ ಸೇವಾ ಸಮತಿ ಹಾಗೂ ಪ್ರಗತಿಪರ ದಲಿತ ಒಕ್ಕೂಟದ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು.